ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ: ಅಧಿಸೂಚನೆ ಅಂತಿಮಗೊಳಿಸಲು ಆರು ತಿಂಗಳ ಗಡುವು

Last Updated 9 ಜನವರಿ 2022, 15:34 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮಘಟ್ಟದಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಅನ್ವಯಿಸಿ ಅಧಿಸೂಚನೆಯನ್ನು ಅಂತಿಮಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಇನ್ನೂ ಆರು ತಿಂಗಳು ಸಮಯಾವಕಾಶ ನೀಡಿದೆ.

ಪರಿಸರಸ್ನೇಹಿ ವಲಯಗಳಿಗೆ ಸಂಬಂಧಿಸಿ ಹಾಲಿ ಇರುವ ಅಧಿಸೂಚನೆ ಕುರಿತಂತೆ ವಸ್ತುಸ್ಥಿತಿ ವರದಿ ಸದ್ಯ ಲಭ್ಯವಿಲ್ಲ ಎಂದುಎನ್‌ಜಿಟಿ ಪ್ರಧಾನಪೀಠದ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯಲ್ ಹೇಳಿದರು. ‘ಆದಷ್ಟು ಶೀಘ್ರ ಅಂದರೆ ಆರು ತಿಂಗಳೊಳಗೆ ಅಧಿಸೂಚನೆಯನ್ನು ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಅಧಿಸೂಚನೆಯನ್ನು ಅಂತಿಮಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂದು ಗೋವಾ ಫೌಂಡೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಪೀಠ ಈ ಗಡುವು ನಿಗದಿಪಡಿಸಿತು.

‘ಅಭಿವೃದ್ಧಿ ಅಗತ್ಯವಿದೆ’ ಎಂದು ವಾದಿಸುವವರಿಂದ ವಿನಾಯಿತಿ ಕೋರಿ ಹೆಚ್ಚು ಬೇಡಿಕೆ ಬರುತ್ತಿದೆ. ಆದರೆ, ‘ಪರಿಸರ ರಕ್ಷಣೆಯ ಅಗತ್ಯ’ ಪ್ರತಿಪಾದಿಸುವವರು ಇಂಥ ಬೇಡಿಕೆಗಳಿಗೆ ಅವಕಾಶ ನೀಡುತ್ತಿಲ್ಲ. ಕಳೆದ ಎಂಟು ವರ್ಷದಿಂದಲೂ ಇಂತಹ ಬೇಡಿಕೆ ಕುರಿತ ಮನವಿಗಳು ಬಾಕಿ ಉಳಿದಿದ್ದು, ಇತ್ಯರ್ಥಗೊಳಿಸಬೇಕಾಗಿದೆ ಎಂದೂ ಪೀಠ ಹೇಳಿತು.

ಈ ವಿಷಯದಲ್ಲಿ ನಿರಂತರವಾಗಿ ವಿಳಂಬ ಆಗುವುದನ್ನು ಒಪ್ಪಲಾಗದು. ಪರಿಸರ ರಕ್ಷಣೆಯ ದೃಷ್ಟಿಯಿಂದ ಆದಷ್ಟು ತುರ್ತಾಗಿ ಕ್ರಮಗಳು ಅಗತ್ಯವಾಗಿವೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಇದಕ್ಕೂ ಮೊದಲು ಎನ್‌ಜಿಟಿಯು ಕೇಂದ್ರ ಸಚಿವಾಲಯಕ್ಕೆ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಅನ್ವಯಿಸಿ ಅಧಿಸೂಚನೆಯನ್ನು ಅಂತಿಮಗೊಳಿಸಲು 2020ರ ಡಿಸೆಂಬರ್‌ 31ರ ಗಡುವು ನಿಗದಿಪಡಿಸಿತ್ತು.

2011ರಲ್ಲಿ ಅರಣ್ಯ ಮತ್ತು ಪರಿಸರ ಸಚಿವಾಲಯವು ರಚಿಸಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್‌ ನೇತೃತ್ವದ ಸಮಿತಿಯು, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ 1,29,037 ಚದರ ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಬೇಕು ಮತ್ತು ರಕ್ಷಿಸಬೇಕು ಎಂದು ಶಿಫಾರಸು ಮಾಡಿತ್ತು. ನಂತರ, 2012ರಲ್ಲಿ ರಚಿಸಲಾದ ಕಸ್ತೂರಿರಂಗನ್‌ ನೇತೃತ್ವದ ಸಮಿತಿಯು ಈ ವ್ಯಾಪ್ತಿಯನ್ನು 56,825 ಚದರ ಕಿ.ಮೀ.ಗೆ ಇಳಿಸಿತ್ತು. ಈಗ ವಿವಿಧ ರಾಜ್ಯಗಳು ಈ ವ್ಯಾಪ್ತಿಯನ್ನು 50,805 ಚದರ ಕಿ.ಮೀಗೆ ಇಳಿಸಬೇಕು ಎಂದು ಆಗ್ರಹಪಡಿಸಿವೆ.

ಎನ್‌ಜಿಟಿ ಈ ಹಿಂದೆ ಆಗಸ್ಟ್‌ 24, 2018ರಲ್ಲಿ ನ್ಯಾಯಮಂಡಳಿ ಒಪ್ಪಿರುವ ಈ ವ್ಯಾಪ್ತಿಯನ್ನು ಕುಗ್ಗಿಸಬಾರದು ಮತ್ತು ಬದಲಿಸಬಾರದು ಎಂದು ನಿರ್ದೇಶನ ನೀಡಿತ್ತು. ಡಿಸೆಂಬರ್ 2020ರಲ್ಲಿ ಅರಣ್ಯ ಮತ್ತು ಪರಿಸರ ಸಚಿವಾಲಯವು, ಕೋವಿಡ್ ಕಾರಣ ನೀಡಿ ಅಧಿಸೂಚನೆ ಅಂತಿಮಗೊಳಿಸಲು ಹೆಚ್ಚಿನ ಸಮಯ ಕೋರಿತ್ತು. ಪಶ್ಚಿಮ ಘಟ್ಟ ವ್ಯಾಪ್ತಿಗೆ ಬರುವ ರಾಜ್ಯಗಳು, ವ್ಯಾಪ್ತಿಯಿಂದ ಪ್ರದೇಶ ಕೈಬಿಡುವ ಕುರಿತು ಇನ್ನೂ ಮನವಿ ಸಲ್ಲಿಸಬೇಕಾಗಿದೆ.

ಕೇಂದ್ರ ಸರ್ಕಾರವು 2010ರಲ್ಲಿ, ‘ಪಶ್ಚಿಮಘಟ್ಟವು ಜಾಗತಿಕ ಜೀವವೈವಿಧ್ಯ ತಾಣವಾಗಿದ್ದು, ರಕ್ಷಿಸುವ ಅಗತ್ಯವಿದೆ' ಎಂದು ಪ್ರತಿಪಾದಿಸಿ ಸಮಿತಿ ರಚಿಸಿತು. ಗಾಡ್ಗೀಳ್‌ ಸಮಿತಿಯ ಶಿಫಾರಸುಗಳಿಗೆ ವ್ಯಕ್ತವಾದ ವಿರೋಧದ ಕಾರಣ 2012ರಲ್ಲಿ ಕಸ್ತೂರಿರಂಗನ್‌ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿತು. ಈ ಸಮಿತಿಯ ವರದಿಗೂ ವಿವಿಧ ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ.

ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಕುಗ್ಗಿಸಬೇಕು ಹಲವು ರಾಜ್ಯಗಳು ಮನವಿ ಸಲ್ಲಿಸಿವೆ. ಕೆಲವು ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವುದರಿಂದ ವೈದ್ಯಕೀಯ ಆರೈಕೆ, ಆರೋಗ್ಯ ಸೇವೆ ಮತ್ತು ಶಿಕ್ಷಣ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂದು ಈ ರಾಜ್ಯಗಳು ಪ್ರತಿಪಾದಿಸಿವೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT