ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆಗೆ ನಿರ್ಲಕ್ಷ್ಯ: ಎನ್‌ಎಚ್‌ಐಎಗೆ ಎನ್‌ಜಿಟಿ ತರಾಟೆ

Last Updated 4 ಡಿಸೆಂಬರ್ 2020, 13:01 IST
ಅಕ್ಷರ ಗಾತ್ರ

ನವದೆಹಲಿ: ಪರಿಸರ ಸಂರಕ್ಷಣೆ ಕುರಿತು ಅಲಕ್ಷ್ಯ ತೋರಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು(ಎನ್‌ಎಚ್‌ಎಐ) ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು(ಎನ್‌ಜಿಟಿ), ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಯಲು ಹೆದ್ದಾರಿಯ ಎರಡೂ ಬದಿಗಳಲ್ಲಿ ಮರಗಳ ಅವಶ್ಯಕತೆ ಇದೆ ಎಂದು ಹೇಳಿದೆ.

‘ರಸ್ತೆಯನ್ನು ಆಯಾ ಗುತ್ತಿಗೆದಾರರು ನಿರ್ಮಾಣ ಮಾಡುತ್ತಾರೆ. ಕಾನೂನನ್ನು ಪಾಲಿಸುವುದು ಅವರ ಜವಾಬ್ದಾರಿ ಎನ್ನುವ ಎನ್‌ಎಚ್‌ಐಎ ನಿಲುವು ಸಮರ್ಥನೀಯವಲ್ಲ. ಇದು ಅಲಕ್ಷ್ಯವನ್ನು ತೋರಿಸುತ್ತದೆ ಹಾಗೂ ಕರ್ತವ್ಯದ ಉಲ್ಲಂಘನೆ’ ಎಂದು ಎನ್‌ಜಟಿ ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನು ನೆಡಬೇಕು ಎಂದು 2017 ಸೆ.5ರಂದು ಎನ್‌ಜಿಟಿ ನೀಡಿದ್ದ ಆದೇಶ ಪಾಲನೆ ಆಗುತ್ತಿಲ್ಲ ಎಂದು ಸರ್ಕಾರೇತರ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ, ‘ಈ ಕೆಲಸ ನಮ್ಮ ಜವಾಬ್ದಾರಿಯಲ್ಲ. ಗುತ್ತಿಗೆದಾರರ ಜವಾಬ್ದಾರಿ ಅದು’ ಎಂದು ಎನ್‌ಎಚ್‌ಎಐ ಹಾಗೂ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ(ಎನ್‌ಎಚ್‌ಐಡಿಸಿಎಲ್‌) ಹೇಳಿತ್ತು.

‘ಪರಿಸರ ಕಾನೂನಿನಡಿ ಎನ್‌ಎಚ್‌ಐಎ ಹಾಗೂ ಅದರ ಹಿರಿಯ ಅಧಿಕಾರಿಗಳ ಮೇಲಿನ ಕ್ರಿಮಿನಲ್‌ ಹಾಗೂ ಸಾರ್ವಜನಿಕ ಹೊಣೆಗಾರಿಕೆ ಕುರಿತ ತನಿಖೆ ಮುಂದುವರಿಯಲಿದ್ದು, ಪರಿಹಾರ ಪಾವತಿಯೂ ಮುಂದುವರಿಯಲಿದೆ. ಸಾರ್ವಜನಿಕ ಪ್ರಾಧಿಕಾರವೊಂದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಷಯದ ಕುರಿತು ಈ ರೀತಿ ನಿರ್ಲಕ್ಷ್ಯ ತೋರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಎ.ಕೆ.ಗೋಯಲ್‌ ಅವರಿದ್ದ ಪೀಠವು ಹೇಳಿತು.

‘ಎನ್‌ಎಚ್‌ಎಐ ಮಾತ್ರವಲ್ಲದೆ, ರಾಜ್ಯ ಲೋಕೋಪಯೋಗಿ ಇಲಾಖೆಗಳೂ ಇದನ್ನು ಪಾಲಿಸಬೇಕು. ಈ ಕೆಲಸವು ಯಾವುದೇ ದೇಣಿಗೆಯಲ್ಲ ಬದಲಾಗಿ ಸಾಂವಿಧಾನಿಕ ಆದೇಶ’ ಎಂದು ಪೀಠವು ಹೇಳಿತು. ‘ಪರಿಸರ ನಿಯಮಗಳನ್ನು ಪಾಲಿಸುವ ಜವಾಬ್ದಾರಿಯನ್ನು ಹೊತ್ತ ಅಧಿಕಾರಿಗಳ ಮಾಹಿತಿಯನ್ನು ಎನ್‌ಎಚ್‌ಐಎ ಹಾಗೂ ಎನ್ಎಚ್‌ಐಡಿಸಿಎಲ್‌ ನೀಡಬೇಕು’ ಎಂದು ಪೀಠವು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT