ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿ ಪದ್ಧತಿ: ಕರ್ನಾಟಕ ಸೇರಿ 6 ರಾಜ್ಯಗಳಿಂದ ವರದಿ ಕೇಳಿದ ಎನ್‌ಎಚ್‌ಆರ್‌ಸಿ

Last Updated 14 ಅಕ್ಟೋಬರ್ 2022, 16:40 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕೆಲ ರಾಜ್ಯಗಳು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳದೇವಸ್ಥಾನಗಳಲ್ಲಿ ಈಗಲೂ ಮುಂದುವರಿದಿರುವ ದೇವದಾಸಿ ಪದ್ಧತಿ ನಿರ್ಮೂಲನೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವರದಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ) ನೋಟಿಸ್ ಜಾರಿ ಮಾಡಿದೆ.

ಮಾಧ್ಯಮ ವರದಿಗಳನ್ನು ಆಧರಿಸಿ ಸುಮೊಟೊ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎನ್‌ಎಚ್‌ಆರ್‌ಸಿ ಹೇಳಿದೆ.

'ದೇವದಾಸಿ ಪದ್ಧತಿಯನ್ನು ತಡೆಯಲು ಈ ಹಿಂದೆ ವಿವಿಧ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಆ ಅನಿಷ್ಟ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಯುವತಿಯರನ್ನು ದೇವದಾಸಿಯರನ್ನಾಗಿ ಮಾಡುವ ಹೀನ ಆಚರಣೆ ಬಗ್ಗೆ ಸುಪ್ರೀಂ ಕೋರ್ಟ್ ಸಹ ಕಠಿಣ ನಿಲುವು ತಳೆದಿತ್ತು’ಎಂದು ಅದು ಹೇಳಿದೆ.

ಲೈಂಗಿಕವಾಗಿ ಮಹಿಳೆಯರ ಶೋಷಣೆ, ವೇಶ್ಯಾವಾಟಿಕೆಗೆ ದೂಡುವ ಈ ಅನಿಷ್ಟ ಆಚರಣೆಯನ್ನು ತೀವ್ರವಾಗಿ ಖಂಡಿಸಿದ್ದ ಸುಪ್ರೀಂ ಕೋರ್ಟ್, ಇದು ಜೀವಿಸುವ ಹಕ್ಕಿನ ಗಂಭೀರ ಉಲ್ಲಂಘನೆ ಮತ್ತು ಮಹಿಳೆಯರ ಘನತೆ ಹಾಗೂ ಸಮಾನತೆಗೆ ಧಕ್ಕೆ ಎಂದು ಹೇಳಿತ್ತು.

ದೇವದಾಸಿ ಪದ್ಧತಿ ಬಗೆಗಿನ ಮಾಧ್ಯಮಗಳ ವರದಿ ಉಲ್ಲೇಖಿಸಿರುವ ಎನ್‌ಎಚ್‌ಆರ್‌ಸಿ, ಸಂತ್ರಸ್ತರೆಲ್ಲರೂ ಬಡವರು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದೆ.

‘ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕ್ರಮವಾಗಿ 1982 ಮತ್ತು 1988ರಲ್ಲೇ ದೇವದಾಸಿ ಪದ್ಧತಿಯನ್ನು ಕಾನೂನು ಬಾಹಿರ ಎಂದು ಘೋಷಿಸಲಾಗಿದೆ. ಆದರೂ, ಕರ್ನಾಟಕವೊಂದರಲ್ಲೇ 70,000 ಮಹಿಳೆಯರು ದೇವದಾಸಿಯರಾಗಿ ಜೀವಿಸುತ್ತಿದ್ದಾರೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ 80,000 ದೇವದಾಸಿಯರಿದ್ದಾರೆ ಎಂದು ನ್ಯಾಯಮೂರ್ತಿ ರಘುನಥ್ ರಾವ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು ವರದಿ ನೀಡಿದೆ’ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

ಕೇಂದ್ರದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮುಖ್ಯ ಕಾರ್ಯದರ್ಶಿಗಳಿಗೆ ಆಯೋಗ ನೋಟಿಸ್ ಜಾರಿ ಮಾಡಿದೆ.

ದೇವದಾಸಿ ಪದ್ಧತಿ ತಡೆಗೆ ಕೈಗೊಂಡ ಕ್ರಮಗಳ ಕುರಿತು 6 ವಾರಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT