ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆಗೆ ನೆರವು: ಛೋಟಾ ಶಕೀಲ್‌ ಸಹಚರರ ಬಂಧನ

Last Updated 13 ಮೇ 2022, 10:57 IST
ಅಕ್ಷರ ಗಾತ್ರ

ಮುಂಬೈ: ದೇಶದಿಂದ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಯಂತ್ರಿತ ಕಾನೂನು ಬಾಹಿರ ಚಟುವಟಿಕೆಗಳು ಮತ್ತುಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ವ್ಯವಹಾರ ನಿರ್ವಹಿಸುತ್ತಿದ್ದ ಆತನ ಬಲಗೈ ಬಂಟ ಛೋಟಾ ಶಕೀಲ್‌ನ ಇಬ್ಬರು ಆಪ್ತ ಸಹಚರರನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಬಂಧಿಸಿದೆ.

ಸಹೋದರರಾದ ಆರೀಫ್‌ ಅಬುಬಕರ್‌ ಶೇಖ್‌ (59) ಮತ್ತು ಶಬ್ಬೀರ್‌ ಅಬುಬಕರ್‌ ಶೇಖ್‌ (51) ಬಂಧಿತ ಆರೋಪಿಗಳು.

ದಾವೂದ್ ಇಬ್ರಾಹಿಂ ನಿಯಂತ್ರಣದ ‘ಡಿ-ಕಂಪನಿ’ ಕೂಟದ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಎನ್ಐಎ, ಆರಿಫ್‌ನನ್ನು ಮುಂಬೈನ ಉಪನಗರದ ಪಶ್ಚಿಮದ ಗೋರೆಗಾಂವ್‌ನಲ್ಲಿ ಬಂಧಿಸಿದರೆ, ಶಬ್ಬೀರ್‌ನನ್ನು ನೆರೆಯ ಠಾಣೆ ಜಿಲ್ಲೆಯ ಪೂರ್ವದ ಮೀರಾ ರೋಡ್‌ನಲ್ಲಿ ಗುರುವಾರ ಬಂಧಿಸಿದೆ. ಆರೋಪಿಗಳನ್ನುಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದುಅಧಿಕಾರಿಗಳು ತಿಳಿಸಿದ್ದಾರೆ.

‘ಛೋಟಾ ಶಕೀಲ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಈ ಇಬ್ಬರು ಆರೋಪಿಗಳು, ಇಬ್ರಾಹಿಂ ನಿಯಂತ್ರಣದ ‘ಡಿ-ಕಂಪನಿ’ಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಮುಂಬೈನ ಪಶ್ಚಿಮ ಉಪನಗರಗಳಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿದ್ದಾರೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

‘ದಾವೂದ್‌ ಸಹಚರರನ್ನು ಗುರಿಯಾಗಿಸಿ ಮುಂಬೈ ಮತ್ತು ಠಾಣೆಯ 40 ಸ್ಥಳಗಳಲ್ಲಿ ಇತ್ತೀಚೆಗೆ ದಾಳಿ ನಡೆಸಿದ ಎನ್‌ಐಎ, ಹಲವು ಮಂದಿ ಶಂಕಿತರನ್ನು ವಶಕ್ಕೆ ಪಡೆದಿತ್ತು. ಶಂಕಿತರಲ್ಲಿ ಆರಿಫ್ ಮತ್ತು ಶಬ್ಬೀರ್ ಕೂಡ ಇದ್ದರು. ಈ ಇಬ್ಬರು ಛೋಟಾ ಶಕೀಲ್‌ ಜತೆಗೆ ಹಣಕಾಸು ವಹಿವಾಟು ನಡೆಸಿರುವುದು ವಿಚಾರಣೆಯಲ್ಲಿ ಬಯಲಾಗಿದೆ’ ಎಂದು ಮೂಲಗಳು ಹೇಳಿವೆ.

ಸೋಮವಾರ ನಡೆಸಿದ ದಾಳಿಯಲ್ಲಿ ಎನ್‌ಐಎ, ಮುಂಬೈನಲ್ಲಿ ಛೋಟಾ ಶಕೀಲ್‌ನ ಸಹಾಯಕ ಸಲೀಂ ಖುರೇಷಿ ಅಲಿಯಾಸ್‌ ಸಲೀಂ ಫ್ರೂಟ್‌ನನ್ನು ಬಂಧಿಸಿತ್ತು.ಫೆಬ್ರುವರಿ 3ರಂದು ದಾವೂದ್ ಇಬ್ರಾಹಿಂ ನಿಯಂತ್ರಣದ ಅಪರಾಧ ಕೂಟ ‘ಡಿ– ಕಂಪನಿ’ ವಿರುದ್ಧ ಎನ್ಐಎ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಡಿ– ಕಂಪನಿ ವ್ಯವಹಾರವೇನು?

ದಾವೂದ್ ಇಬ್ರಾಹಿಂ ಕಸ್ಕರ್ ಮತ್ತು ಈತನ ಸಹಚರರಾದ ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಇಬ್ರಾಹಿಂ ಮುಷ್ತಾಕ್‌ ಅಬ್ದುಲ್‌ ರಝಾಕ್‌ ಮೆಮನ್‌ ಅಲಿಯಾಸ್‌ ಟೈಗರ್‌ ಮೆಮನ್‌ ಒಳಗೊಂಡಿರುವ ‘ಡಿ-ಕಂಪನಿ’ ಅಂತರರಾಷ್ಟ್ರೀಯ ಭಯೋತ್ಪಾದಕ ಜಾಲ ಹೊಂದಿದೆ. ಭೂಗತ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಎನ್ಐಎ ತಿಳಿಸಿದೆ.

ಲಷ್ಕರ್ ಎ ತಯಬಾ (ಎಲ್‌ಇಟಿ),ಜೈಶ್ ಎ ಮೊಹಮ್ಮದ್ (ಜೆಇಎಂ) ಮತ್ತು ಅಲ್ ಕೈದಾ ಸೇರಿದಂತೆ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಿ.ಕಂಪನಿಯು ಭಯೋತ್ಪಾದನೆ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಲು ಅನಧಿಕೃತವಾಗಿ ಹಲವು ಕಡೆಗಳಲ್ಲಿ ಆಸ್ತಿ ಹೊಂದಿದೆ. ಅಲ್ಲದೆ, ಡಿ.ಕಂಪನಿಯು ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ವಸ್ತು ವ್ಯವಹಾರದಿಂದ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು,ಹಣ ಅಕ್ರಮವಾಗಿ ವರ್ಗಾವಣೆ ಮಾಡುವುದು, ನಕಲಿ ನೋಟು ಚಲಾವಣೆಯಲ್ಲೂ ತೊಡಗಿದೆ ಎಂದು ಎನ್‌ಐಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT