ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ನಾ ಸರಣಿ ಸ್ಫೋಟ ಪ್ರಕರಣ: 10 ಮಂದಿ ದೋಷಿಗಳು, ಒಬ್ಬ ಖುಲಾಸೆ

ವಿಶೇಷ ಎನ್‌ಐಎ ನ್ಯಾಯಾಲಯದ ತೀರ್ಪು
Last Updated 27 ಅಕ್ಟೋಬರ್ 2021, 11:49 IST
ಅಕ್ಷರ ಗಾತ್ರ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರುಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ರ್‍ಯಾಲಿ ಸ್ಥಳದಲ್ಲಿ 2013ರಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಶೇಷ ಎನ್‌ಐಎ ನ್ಯಾಯಾಲಯವು 10 ಮಂದಿ ಆರೋಪಿಗಳನ್ನು ದೋಷಿಗಳೆಂದು ಬುಧವಾರ ತೀರ್ಪು ನೀಡಿದೆ.

ಆರೋಪಿಗಳಲ್ಲಿ ಒಬ್ಬನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ವಿಶೇಷ ಎನ್‌ಐಎ ನ್ಯಾಯಾಧೀಶ ಗುರ್ವಿಂದರ್ ಮೆಹ್ರೋತ್ರಾ ಅವರು ಆರೋಪದಿಂದ ಖುಲಾಸೆಗೊಳಿಸಿದರು.

‘ಒಬ್ಬನನ್ನು ಹೊರತುಪಡಿಸಿ ಎಲ್ಲರಿಗೂ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು ನ.1 ರಂದು ಪ್ರಕಟಿಸಲಾಗುವುದು’ ಎಂದು ತನಿಖಾ ಸಂಸ್ಥೆಯ ಪರವಾಗಿ ಹಾಜರಾಗಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಲಾಲನ್ ಪ್ರಸಾದ್ ಸಿಂಗ್ ತಿಳಿಸಿದರು.

ಇಮ್ತಿಯಾಜ್ ಅನ್ಸಾರಿ, ಮುಜಿಬುಲ್ಲಾ, ಹೈದರ್ ಅಲಿ, ಫಿರೋಜ್ ಅಸ್ಲಾಂ, ಒಮರ್ ಅನ್ಸಾರಿ, ಇಫ್ತಿಕಾರ್, ಅಹ್ಮದ್ ಹುಸೇನ್, ಉಮೈರ್ ಸಿದ್ದಿಕಿ ಮತ್ತು ಅಜರುದ್ದೀನ್ ಎಂಬುವವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿದೆ. ಫಕ್ರುದ್ದೀನ್ ಎಂಬಾತನನ್ನು ಆರೋಪದಿಂದ ಖುಲಾಸೆಗೊಳಿಸಿದೆ ಎಂದು ಅವರು ಹೇಳಿದರು.

ತನಿಖೆಯ ವೇಳೆ ಎನ್ಐಎ 11 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಇವರಲ್ಲಿ ಒಬ್ಬ ಅಪ್ರಾಪ್ತನಾಗಿದ್ದು, ಆತನ ಪ್ರಕರಣವನ್ನು ಬಾಲನ್ಯಾಯ ಮಂಡಳಿಗೆ ವರ್ಗಾಯಿಸಲಾಗಿದೆ. ಉಳಿದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು.

2013ರ ಅಕ್ಟೋಬರ್ 27ರಂದು ಗಾಂಧಿ ಮೈದಾನದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಅವರು ಪಾಲ್ಗೊಂಡಿದ್ದ ಬಿಜೆಪಿಯ ‘ಹುಂಕಾರ್ ರ‍್ಯಾಲಿ’ ವೇಳೆ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದವು.

ಸ್ಫೋಟಗಳಿಂದ ಮತ್ತು ನಂತರ ಉಂಟಾದ ಕಾಲ್ತುಳಿತಕ್ಕೆ ಸಿಲುಕಿ ಆರು ಮಂದಿ ಮೃತಪಟ್ಟಿದ್ದರು. ಹಲವು ಮಂದಿ ಗಾಯಗೊಂಡಿದ್ದರು. ಆದರೆ, ಯಾವುದೇ ಭಯೋತ್ಪಾದಕ ಸಂಘಟನೆಯು ಈ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲವಾದರೂ, ಸಿಮಿ ಮತ್ತು ಅದರ ಹೊಸ ರೂಪ ಇಂಡಿಯನ್ ಮುಜಾಹಿದ್ದೀನ್‌ ಈ ಕೃತ್ಯ ನಡೆಸಿವೆ ಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT