ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ಸುಖ್ ಹಿರೇನ್ ಅನುಮಾನಾಸ್ಪದ ಸಾವು: ಎನ್‌ಐಎ ಹೆಗಲಿಗೆ ತನಿಖೆಯ ಜವಾಬ್ದಾರಿ

ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಪ್ರಕರಣ
Last Updated 20 ಮಾರ್ಚ್ 2021, 20:05 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ಮುಖೇಶ್‍ ಅಂಬಾನಿ ಅವರ ಇಲ್ಲಿನ ನಿವಾಸದ ಬಳಿ ಪತ್ತೆಯಾಗಿದ್ದ, ಸ್ಫೋಟಕಗಳಿದ್ದ ವಾಹನದ ಮಾಲೀಕ ಮನ್‍ಸುಖ್‍ ಹಿರೇನ್‍ ಅವರ ಶಂಕಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಹಿಸಿಕೊಂಡಿದೆ.

ಕೇಂದ್ರ ಗೃಹ ಸಚಿವಾಲಯ ಈ ಕುರಿತು ಎನ್‍ಐಎಗೆ ಸೂಚನೆ ನೀಡಿದೆ. ಇದುವರೆಗೂ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸ್‍ನ ಅಪರಾಧ ನಿಗ್ರಹ ಘಟಕ (ಎಟಿಎಸ್‍) ನಡೆಸುತ್ತಿತ್ತು. ಎನ್‍ಐಎ ಅಧಿಕಾರಿಗಳು ಈಗಾಗಲೇ ಎಟಿಎಸ್‍ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಕರಣದ ವಿವರವನ್ನೂ ಪಡೆದುಕೊಂಡಿದ್ದಾರೆ.

ಪುಣೆಯಲ್ಲಿ ಕಾರು ಬಿಡಿಭಾಗಗಳ ಮಾರಾಟದ ವ್ಯವಹಾರ ನಡೆಸುವ ಹಿರೇನ್ (48) ಮಾರ್ಚ್‌ 4ರಿಂದ ನಾಪತ್ತೆಯಾಗಿದ್ದರು. ಅವರ ಶವವು ನಂತರ ಶಂಕಾಸ್ಪದ ರೀತಿಯಲ್ಲಿ ಠಾಣೆಯ ಮುಂಬೈ-ಕಾಲ್ವಾದಲ್ಲಿ ರೇಟಿ ಬಂದರ್ ಸಮೀಪ ಪತ್ತೆಯಾಗಿತ್ತು.

ಬಿಜೆಪಿ ಒತ್ತಾಯದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ ಎಟಿಎಸ್‍ಗೆ ವಹಿಸಿತ್ತು. ಮೃತ ಹಿರೇನ್‍ ಪತ್ನಿ ವಿಮಲಾ ಅವರು ದೂರು ನೀಡಿದ್ದು, ನನ್ನ ಪತಿ ಶಂಕಿತ ವಾಹನವನ್ನು ಬಳಸುತ್ತಿದ್ದರು ಎಂಬುದು ಎಸಿಪಿ ವಾಜೆ ಅವರಿಗೆ ತಿಳಿದಿದ್ದು, ಅವರೇ ಪತಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು.

ಪ್ರಕರಣದ ಮರುಸೃಷ್ಟಿ

ಈ ಮಧ್ಯೆ, ಪ್ರಕರಣದ ತನಿಖೆ ಕೈಗೊಂಡಿರುವ ಎನ್ಐಎ ಅಧಿಕಾರಿಗಳು ಶನಿವಾರ, ಮುಖೇಶ್‍ ಅಂಬಾನಿ ನಿವಾಸದ ಬಳಿ ವಾಹನ ಪತ್ತೆಯಾಗಿದ್ದ ಸ್ಥಳದಲ್ಲಿ ಪ್ರಕರಣದ ಮರುಸೃಷ್ಟಿ ನಡೆಸಿದರು.

ಬಂಧಿತ ಪೊಲೀಸ್‍ ಅಧಿಕಾರಿ, ಪೂರ್ಣ ತೋಳಿನ ಶರ್ಟ್‌, ಪ್ಯಾಂಟ್‍ ಧರಿಸಿ, ತಲೆಯ ಮೇಲೆ ಕರವಸ್ತ್ರ ಹೊದ್ದು ಸಚಿನ್ ವಾಜೆ ಅವರು ಸ್ಥಳದಲ್ಲಿ ನಡೆದಾಡುವಂತೆ ಸೂಚಿಸಲಾಯಿತು. ಕಾರ್‍ ಮೈಖೇಲ್‍ ರಸ್ತೆಯಲ್ಲಿ ಪ್ರಕರಣದ ಮರುಸೃಷ್ಟಿ ಮಾಡಲಾಯಿತು.

ಬಂಧಿತ ಅಧಿಕಾರಿ ವಾಜೆ ಅವರೇ ಜಿಲೆಟಿನ್‍ ಕಡ್ಡಿಗಳು ಮತ್ತು ಬೆದರಿಕೆ ಪತ್ರವಿದ್ದ ವಾಹನವನ್ನು ಫೆಬ್ರುವರಿ 24-25ರ ಮಧ್ಯರಾತ್ರಿ ನಿಲ್ಲಿಸಲು ಕ್ರಮ ಕೈಗೊಂಡಿದ್ದರು ಎಂದು ಆರೋಪಿಸಲಾಗಿದೆ. ವಾಹನ ಪತ್ತೆಯಾದ ಎರಡು ದಿನಗಳ ನಂತರ ಪಿಪಿಇ ಕಿಟ್ ಧರಿಸಿದ್ದ ವ್ಯಕ್ತಿ ಶಂಕಾಸ್ಪದವಾದ ವಾಹನದಲ್ಲಿ ತೆರಳಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಎರಡಕ್ಕೂ ಸಂಬಂಧವಿದೆಯೇ ಎಂದು ತಿಳಿಯುವುದು ಮರುಸೃಷ್ಟಿಯ ಉದ್ದೇಶವಾಗಿತ್ತು.

ಮುಂಬೈ ಅಲ್ಲದೆ, ನೆರೆಯ ಠಾಣೆ ಜಿಲ್ಲೆಯ ವಿವಿಧೆಡೆಗೆ ಅಧಿಕಾರಿಗಳು ವಾಜೆ ಅವರನ್ನು ಕರೆದೊಯ್ದಿದ್ದು, ಸಾಕ್ಷ್ಯ ಸಂಗ್ರಹಿಸಿದರು. ತನಿಖೆಗೆ ತೊಡಕು ಆಗದಂತೆ ರಸ್ತೆಯ ಎರಡೂ ಬದಿಯಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

ಜಿಲೆಟಿನ್‍ ಕಡ್ಡಿ ಕಡಿಮೆ ತೀವ್ರತೆಯದ್ದು:

ಉದ್ಯಮಿ ಮುಕೇಶ್‍ ಅಂಬಾನಿ ನಿವಾಸದ ಬಳಿ ಪತ್ತೆಯಾಗಿದ್ದ ವಾಹನದಲ್ಲಿ ಕಂಡುಬಂದಿದ್ದ ಜಿಲೆಟಿನ್‍ ಕಡ್ಡಿಗಳು ಸ್ಫೋಟದ ಕಡಿಮೆ ತೀವ್ರತೆ ಹೊಂದಿದ್ದವಾಗಿದ್ದು, ದೊಡ್ಡ ಹಾನಿ ಉಂಟು ಮಾಡುವ ಸಾಧ್ಯತೆ ಕಡಿಮೆ ಇತ್ತು ಎಂದು ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟಿದೆ. ಅಧಿಕಾರಿಗಳು ಇದನ್ನು ದೃಢಪಡಿಸಿದ್ದಾರೆ.

ಜಿಲೆಟಿನ್‍ ಕಡ್ಡಿಗಳ ಒಳಗೆ ಅಮೋನಿಯಂ ನೈಟ್ರೇಟ್‍ ಇತ್ತು. ಪ್ರಾಥಮಿಕ ವಿಶ್ಲೇಷಣೆಯ ಅನುಸಾರ ಇವು ಕಡಿಮೆ ತೀವ್ರತೆ ಹೊಂದಿದ್ದವು. ಇದು, ಗ್ರಾಮೀಣ ಭಾಗದಲ್ಲಿ ಬಾವಿ ಕೊರೆಯಿಸಲು, ರಸ್ತೆ ನಿರ್ಮಾಣ ಚಟುವಟಿಕೆಯಲ್ಲಿ ಬಳಸುವಂತದ್ದಾಗಿದ್ದವು ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಕಲಿನಾದಲ್ಲಿ ಇರುವ ಪ್ರಯೋಗಾಲಯವು, 20 ಜಿಲೆಟಿನ್‍ ಕಡ್ಡಿಗಳು ಕಂಡುಬಂದಿದ್ದ ವಾಹನವನ್ನು ತಪಾಸಣೆ ನಡೆಸುತ್ತಿದೆ. ವಾಹನದ ಚಾರ್ಸಿ ಸಂಖ್ಯೆ ಬದಲಿಸಲಾಗಿದೆಯೇ ಎಂಬುದರ ಪತ್ತೆಗೆ ರಾಸಾಯನಿಕ ಪರಿಣತರ ನೆರವು ಪಡೆಯಲಾಗಿದೆ. ಇದು, ವಾಹನದ ಅಸಲಿ ಮಾಲೀಕನ ಪತ್ತೆಗೆ ನೆರವಾಗಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT