ಗಡಿಯಲ್ಲಿ ಸೇನೆ ಹಿಂತೆಗೆತ ಗೋಚರಿಸುತ್ತಿಲ್ಲ: ಜೈಶಂಕರ್

ಅಮರಾವತಿ: ‘ಪೂರ್ವ ಲಡಾಖ್ ಗಡಿಯಲ್ಲಿ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ವಾಸ್ತವದಲ್ಲಿ ಅದು ಕಾರ್ಯರೂಪಕ್ಕೆ ಬಂದಿರುವುದು ಗೋಚರಿಸುತ್ತಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದರು.
‘ಗಡಿಯಲ್ಲಿ ನಿಯೋಜಿಸಿರುವ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ಭಾರತ ಮತ್ತು ಚೀನಾದ ಮಿಲಿಟರಿ ಕಮಾಂಡರ್‌ಗಳ ನಡುವೆ ಇಲ್ಲಿವರೆಗೂ ಒಂಬತ್ತು ಸುತ್ತು ಮಾತುಕತೆ ನಡೆದಿದೆ. ಭವಿಷ್ಯದಲ್ಲೂ ಈ ಮಾತುಕತೆ ಮುಂದುವರಿಯಲಿದೆ’ ಎಂದೂ ಅವರು ತಿಳಿಸಿದರು.
ವಿಜಯವಾಡದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರ ಬಹಳ ಸಂಕೀರ್ಣವಾದ ವಿಷಯ. ಯಾವ ಭೌಗೋಳಿಕ ಪ್ರದೇಶದಲ್ಲಿ, ಯಾವ ಸ್ಥಳದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಮೊದಲು ಅರಿಯಬೇಕಿದೆ. ಈ ಎಲ್ಲ ವಿಚಾರಗಳನ್ನು ಸೇನೆಯ ಕಮಾಂಡರ್‌ಗಳು ನಿರ್ವಹಿಸುತ್ತಿದ್ದಾರೆ‘ ಎಂದು ಹೇಳಿದರು.
ಕಳೆದ ವರ್ಷದ ಮೇ 5 ರಂದು ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತು ಭಾರತ ಸೇನೆಗಳು ಜಮಾಯಿಸಿದ್ದವು. ಎರಡು ದೇಶಗಳ ಸೈನಿಕರ ನಡುವೆ ಘರ್ಷಣೆಯೂ ನಡೆದಿತ್ತು. ಗಡಿಯಿಂದ ನಿಯೋಜಿತ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಸಂಬಂಧ ಎರಡು ದೇಶಗಳ ರಾಜತಾಂತ್ರಿಕ ಮತ್ತು ಸೇನಾ ಕಮಾಂಡರ್‌ಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿದ್ದವು. ಆದರೆ, ಇಲ್ಲಿವರೆಗೂ ಯಾವುದೇ ಮಹತ್ವದ ಪ್ರಗತಿ ಕಂಡು ಬಂದಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.