ಬುಧವಾರ, ಡಿಸೆಂಬರ್ 8, 2021
18 °C

ಕಾಂಗ್ರೆಸ್ ಸರ್ಕಾರವೂ ಆಸ್ತಿ ನಗದೀಕರಣ ಮಾಡಿತ್ತು: ರಾಹುಲ್‌ಗೆ ನಿರ್ಮಲಾ ತಿರುಗೇಟು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಹಿಂದಿನ ಕಾಂಗ್ರೆಸ್ ಸರ್ಕಾರಗಳೂ ಆಸ್ತಿ ನಗದೀಕರಣ ಮಾಡಿದ್ದವು. ತಾನು ಒಪ್ಪದ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಹಾಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆ ನಗದೀಕರಣ ಪ್ರಸ್ತಾವಗಳನ್ನೇಕೆ ಹರಿದು ಹಾಕಿರಲಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ₹ 6 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ನು ಟೀಕಿಸಿದ್ದ ರಾಹುಲ್ ಗಾಂಧಿ, 70 ವರ್ಷಗಳಲ್ಲಿ ಸೃಷ್ಟಿಯಾಗಿದ್ದ ಆಸ್ತಿಯನ್ನು ಬಿಜೆಪಿ ಮಾರುತ್ತಿದೆ ಎಂದು ಟೀಕಿಸಿದ್ದರು. ಇದಕ್ಕೆ ಮುಂಬೈಯಲ್ಲಿ ವರದಿಗಾರರ ಜತೆ ಮಾತನಾಡಿದ ವೇಳೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ಓದಿ: 70 ವರ್ಷಗಳಲ್ಲಿ ಸೃಷ್ಟಿಯಾಗಿದ್ದ ಆಸ್ತಿಯನ್ನು ಬಿಜೆಪಿ ಮಾರುತ್ತಿದೆ: ರಾಹುಲ್ ಗಾಂಧಿ

ಭೂಮಿ, ಗಣಿಗಳಂಥ ಸಂಪನ್ಮೂಲಗಳನ್ನು ಲಂಚ ಪಡೆದು ಕಾಂಗ್ರೆಸ್ ಮಾರಾಟ ಮಾಡಿತ್ತು ಎಂದು ಹಣಕಾಸು ಸಚಿವೆ ಆರೋಪಿಸಿದ್ದಾರೆ.

ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ವೇ ಆಸ್ತಿಯನ್ನು ಯುಪಿಎ ಸರ್ಕಾರ ನಗದೀಕರಣ ಮಾಡಿ ₹8,000 ಕೋಟಿ ಗಳಿಸಿತ್ತು. 2008ರಲ್ಲಿ ನವದೆಹಲಿ ರೈಲ್ವೆ ನಿಲ್ದಾಣವನ್ನು ಗುತ್ತಿಗೆಗೆ ನೀಡುವ ಪ್ರಸ್ತಾವ ಮಂಡಿಸಿತ್ತು ಎಂದು ನಿರ್ಮಲಾ ಹೇಳಿದ್ದಾರೆ.

‘ಅವರು (ರಾಹುಲ್ ಗಾಂಧಿ) ನಿಜವಾಗಿಯೂ ನಗದೀಕರಣದ ವಿರುದ್ಧವಿದ್ದರೆ ನವದೆಹಲಿ ರೈಲ್ವೆ ನಿಲ್ದಾಣವನ್ನು ಗುತ್ತಿಗೆಗೆ ನೀಡುವ ಪ್ರಸ್ತಾವವನ್ನು ಏಕೆ ವಿರೋಧಿಸಿರಲಿಲ್ಲ? ಈಗ ಮಾಡುತ್ತಿರುವುದು ಹಣ ಗಳಿಕೆ ಎಂದಾದರೆ ಅವರು (ಯುಪಿಎ) ನವದೆಹಲಿ ರೈಲ್ವೆ ನಿಲ್ದಾಣವನ್ನು ಮಾರಾಟ ಮಾಡಿದ್ದರೇ? ಅವರಿಗೆ ನಗದೀಕರಣ ಎಂದರೆ ಏನೆಂಬುದು ಗೊತ್ತಿದೆಯೇ’ ಎಂದು ಸಚಿವೆ ಪ್ರಶ್ನಿಸಿದ್ದಾರೆ.

70 ವರ್ಷಗಳಲ್ಲಿ ಸೃಷ್ಟಿಯಾಗಿದ್ದ ಆಸ್ತಿಯನ್ನು ಬಿಜೆಪಿ ಮಾರುತ್ತಿದೆ ಎಂಬ ರಾಹುಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ನಿರ್ಮಲಾ, ಕಾಮನ್‌ವೆಲ್ತ್ ಕ್ರೀಡಾಕೂಟದ ಸಂದರ್ಭ ಏನಾಗಿತ್ತು ಎಂದು ಪ್ರಶ್ನಿಸಿದ್ದಾರೆ.

ಓದಿ: 

ಆಸ್ತಿ ನಗದೀಕರಣ ಯೋಜನೆ ಎಂದರೆ ಆಸ್ತಿಯನ್ನು ಮಾರಾಟ ಮಾಡುವುದು ಎಂದಲ್ಲ. ಆಸ್ತಿ ಮತ್ತೆ ಸರ್ಕಾರಕ್ಕೆ ಹಸ್ತಾಂತರವಾಗಲಿದೆ ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ.

ದೇಶದ ಮೂಲಸೌಕರ್ಯ ಯೋಜನೆಗಳಿಗೆ ಸುಸ್ಥಿರವಾಗಿ ಅನುದಾನ ಒದಗಿಸಲು ಕೇಂದ್ರ ಸರ್ಕಾರ ₹ 6 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ನು ಅನಾವರಣಗೊಳಿಸಿದ್ದು, ಈ ಯೋಜನೆ ಅಡಿಯಲ್ಲಿ ರೈಲು ನಿಲ್ದಾಣಗಳು, ರಸ್ತೆಗಳು, ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಕೊಳವೆಮಾರ್ಗ, ವಿದ್ಯುತ್ ವಲಯದ ಯೋಜನೆಗಳನ್ನು ಖಾಸಗಿ ವಲಯದ ಕಂಪನಿಗಳಿಗೆ ಲೀಸ್ ಆಧಾರದಲ್ಲಿ ವರ್ಗಾಯಿಸುವ ಉದ್ದೇಶವನ್ನು ಹೊಂದಿದೆ. ಹಾಲಿ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ನಾಲ್ಕು ವರ್ಷಗಳ ಅವಧಿಯ ಯೋಜನೆ ಇದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಎನ್ಎಂಪಿ ಘೋಷಣೆ ವೇಳೆ ತಿಳಿಸಿದ್ದರು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು