ಭಾನುವಾರ, ಜನವರಿ 24, 2021
17 °C

ಪುದುಚೇರಿ, ಚೆನ್ನೈಯಲ್ಲಿ ಭಾರಿ ಮಳೆ: ‘ನಿವಾರ್‌’ ನಿರ್ವಹಣೆಗೆ ಸರ್ವ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಪುದುಚೇರಿ ಮತ್ತು ತಮಿಳುನಾಡಿನ ವಿವಿಧೆಡೆ ಭಾರಿ ಮಳೆಗೆ ಕಾರಣವಾಗಿರುವ ‘ನಿವಾರ್’‌ ಚಂಡಮಾರುತವು ಬುಧವಾರ ಸಂಜೆ 5 ಗಂಟೆಯ ಹೊತ್ತಿಗೆ ವೇಗ ವೃದ್ಧಿಸಿಕೊಂಡು ತೀವ್ರ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. 

ಬುಧವಾರ ಬೆಳಿಗ್ಗೆ 5.30ರ ಹೊತ್ತಿಗೆ ಗಂಟೆಗೆ 7 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ ‘ನಿವಾರ್‌’ ಸಂಜೆ 5 ಗಂಟೆಯ ಹೊತ್ತಿಗೆ ವೇಗವನ್ನು 16 ಕಿ.ಮೀ.ಗೆ ಹೆಚ್ಚಿಸಿಕೊಂಡಿದೆ. ಚಂಡಮಾರುತವು ಭೂ ಪ್ರದೇಶವನ್ನು ಅಪ್ಪಳಿಸುವ ಸಂದರ್ಭದಲ್ಲಿ ಗಂಟೆಗೆ 120–130 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು. ಕೆಲವೊಮ್ಮೆ ವೇಗವು 145 ಕಿ.ಮೀ.ಗೆ ಹೆಚ್ಚುವ ಸಾಧ್ಯತೆಯೂ ಇದೆ.

ತಮಿಳುನಾಡು ಮತ್ತು ಪುದುಚೇರಿ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಚಂಡಮಾರುತದ ಸಂದರ್ಭದಲ್ಲಿ ಮತ್ತು ನಂತರ ಪರಿಹಾರ ಕಾರ್ಯಗಳಿಗಾಗಿ ಐಎನ್‌ಎಸ್‌ ಸುಮಿತ್ರಾ ಮತ್ತು ಐಎನ್‌ಎಸ್‌ ಜ್ಯೋತಿ ಎಂಬ ಯುದ್ಧನೌಕೆಗಳನ್ನು ಸಜ್ಜಾಗಿ ಇರಿಸಲಾಗಿದೆ. ಭಾರತೀಯ ನೌಕಾಪಡೆ ಮತ್ತು ಭಾರತೀಯ ಕರಾವಳಿ ಗಸ್ತು ಪಡೆ ಕೂಡ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ.

ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಜತೆಗೆ ಕೇಂದ್ರ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ 465 ಆಂಬುಲೆನ್ಸ್‌ಗಳು ಸಿದ್ಧವಾಗಿ ನಿಂತಿವೆ. ‘ನಿವಾರ್‌’ನಿಂದ ಹೆಚ್ಚು ತೊಂದರೆಗೆ ಒಳಗಾಗುವ ಪ್ರದೇಶ ಪುದುಚೇರಿ ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆ ಎಂದು ಗುರುತಿಸಲಾಗಿರುವುದರಿಂದ ಈ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ಚಂಡಮಾರುತದ ತೀವ್ರತೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಬುಧವಾರ ಸಂಜೆ 7ರಿಂದ 12 ತಾಸು ರದ್ದುಪಡಿಸಲಾಗಿದೆ. ಮೆಟ್ರೊ ರೈಲು ಸಂಚಾರವೂ ಇರುವುದಿಲ್ಲ. ತಮಿಳುನಾಡಿನ 16 ಜಿಲ್ಲೆಗಳಲ್ಲಿ ಗುರುವಾರವೂ ಸರ್ಕಾರಿ ರಜೆ ಘೋಷಿಸಲಾಗಿದೆ. 

ಪುದುಚೇರಿ, ಚೆನ್ನೈ ಮತ್ತು ಕರಾವಳಿಯ ಇತರ ಜಿಲ್ಲೆಗಳಲ್ಲಿ ಸೋಮವಾರದಿಂದಲೇ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬುಧವಾರ ಬೆಳಿಗ್ಗೆ 8.30ರ ವರೆಗಿನ 24 ತಾಸುಗಳಲ್ಲಿ ಚೆನ್ನೈ ನಗರದಲ್ಲಿ ಸರಾಸರಿ 16 ಸೆಂ. ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚೆನ್ನೈ, ಕಾಂಚೀಪುರಂ, ತಿರುವಲ್ಲೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳೂ ಭಾರಿ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ಪ್ರವಾಹ ಪರಿಸ್ಥಿತಿಯ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ. 

ಮಳೆಯು ಎಡೆಬಿಡದೆ ಸುರಿಯುತ್ತಿರುವ ಕಾರಣ ರಸ್ತೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಹೊರಗೆ ಪಂಪ್‌ ಮಾಡುವುದಕ್ಕೂ ಕಷ್ಟವಾಗುತ್ತಿದೆ. ಚೆನ್ನೈ ಮಹಾನಗರಪಾಲಿಕೆ ವ್ಯಾಪ್ತಿಯ 58 ಸ್ಥಳಗಳು ಜಲಾವೃತವಾಗಿವೆ. 52 ಸ್ಥಳಗಳಿಂದ ಮರಗಳು ಉರುಳಿ ಬಿದ್ದಿರುವ ದೂರುಗಳು ಬಂದಿವೆ. 

ಹಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದಿವೆ. ಹಾಗಾಗಿ ಚೆನ್ನೈನ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್‌ ಮಾಡಿದ್ದಾರೆ. ಚೆನ್ನೈ–ಪುದುಚೇರಿ–ನಾಗಪಟ್ಟಿಣಂ ನಡುವಣ ರಸ್ತೆಯನ್ನೂ ಬಂದ್‌ ಮಾಡಲಾಗಿದೆ. 

ಪ್ರವಾಹ ಭೀತಿ: ಚೆಂಬರಂಬಕ್ಕಂ ಸರೋವರದಿಂದ 2015ರ ಭಾರಿ ಪ್ರವಾಹದ ಬಳಿಕ ಇದೇ ಮೊದಲಿಗೆ ನೀರು ಹೊರಗೆ ಹರಿಸಲಾಗುತ್ತಿದೆ. ಭಾರಿ ಮಳೆಯಿಂದಾಗಿ ಸರೋವರದ ಒಳ ಹರಿವು ಹೆಚ್ಚಿದೆ. ಚೆನ್ನೈ ನಗರದಿಂದ 30 ಕಿ.ಮೀ. ದೂರದಲ್ಲಿರುವ ಸರೋವರದಿಂದ ನೀರು ಹೊರಗೆ ಹರಿಸಿದರೆ ನಗರವು ಜಲಾವೃತವಾಗಬಹುದು ಎಂಬ ಭೀತಿ ಎದುರಾಗಿದೆ. ಈ ಸರೋವರದ ಜಲಾನಯನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳಲ್ಲಿ 20 ಸೆಂ. ಮೀ. ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. 2015ರಲ್ಲಿ ಈ ಸರೋವರದಿಂದ ನೀರು ಹೊರಗೆ ಹರಿಸಿದ್ದೇ ಚೆನ್ನೈಯಲ್ಲಿ ಪ್ರವಾಹಕ್ಕೆ ಮುಖ್ಯ ಕಾರಣವಾಗಿತ್ತು.

**

* ಪುದುಚೇರಿ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ತೆರವು ಮಾಡಲಾಗಿದೆ.
* ತಮಿಳುನಾಡಿನಲ್ಲಿ 1,445 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.
* ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 50 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
* ತಮಿಳುನಾಡು, ಪುದುಚೇರಿ ಮತ್ತು ಆಂಧ್ರ ‍ಪ್ರದೇಶ ಕರಾವಳಿಯಲ್ಲಿ 30 ತಂಡಗಳನ್ನು ನಿಯೋಜಿಸಲಾಗಿದೆ

ರಾಜ್ಯದಲ್ಲಿ ಇಂದು ಮಳೆ
ಬೆಂಗಳೂರು: ‘ನಿವಾರ್’ ಚಂಡಮಾರುತದ ಪರಿಣಾಮವಾಗಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ.

‘ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

ದಕ್ಷಿಣ ಒಳನಾಡಿನಲ್ಲಿ ಮುಂದಿನ ನಾಲ್ಕು ದಿನ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ನ.26 ಮತ್ತು 28ರಂದು ಅಲ್ಲಲ್ಲಿ ಮಳೆಯಾಗಲಿದ್ದು, ಉಳಿದ ದಿನ ಒಣಹವೆ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು