ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದವರಿಗೆ ಇಂಟರ್ನ್‌ಶಿಪ್‌ಗೆ ಅವಕಾಶ: ಎನ್‌ಎಂಸಿ

Last Updated 5 ಮಾರ್ಚ್ 2022, 11:33 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್ ಸಂಘರ್ಷ, ಕೋವಿಡ್‌ನಂತಹ ಕ್ಲಿಷ್ಟ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಇಂಟರ್ನ್‌ಶಿಪ್ ಅರ್ಧಕ್ಕೆ ನಿಲ್ಲಿಸಿರುವ ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದಿರುವ ವಿದ್ಯಾರ್ಥಿಗಳು ಭಾರತದಲ್ಲೇ ಅದನ್ನು(ಇಂಟರ್ನ್‌ಶಿಪ್ ) ಪೂರ್ಣಗೊಳಿಸಬಹುದು ಎಂದು ರಾಷ್ಟ್ರೀಯ ವೈದ್ಯಕೀಯ ಮಂಡಳಿ(ಎನ್‌ಎಂಸಿ) ಹೇಳಿದೆ.

ಭಾರತದಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ವಿದೇಶದ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಯೇ ಎಂಬುದನ್ನು ರಾಜ್ಯ ವೈದ್ಯಕೀಯ ಮಂಡಳಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಎನ್‌ಎಂಸಿ ಸುತ್ತೋಲೆಯಲ್ಲಿ ತಿಳಿಸಿದೆ.

'ಕೋವಿಡ್ ಸಾಂಕ್ರಾಮಿಕ ಮತ್ತು ಯುದ್ಧದಂತಹ ಅವರ ಕೈಮೀರಿದ ಸಂದರ್ಭಗಳಿಂದಾಗಿ ಇಂಟರ್ನ್‌ಶಿಪ್ ಅಪೂರ್ಣಗೊಂಡಿರುವ ಕೆಲವು ವಿದೇಶಿ ವೈದ್ಯಕೀಯ ಪದವೀಧರರೂ ಇದ್ದಾರೆ. ಈ ವಿದೇಶಿ ವೈದ್ಯಕೀಯ ಪದವೀಧರರು ಎದುರಿಸುತ್ತಿರುವ ಸಂಕಟ ಮತ್ತು ಒತ್ತಡವನ್ನು ಪರಿಗಣಿಸಿ, ಭಾರತದಲ್ಲಿ ಅವರ ಇಂಟರ್ನ್‌ಶಿಪ್‌ನ ಉಳಿದ ಭಾಗವನ್ನು ಪೂರ್ಣಗೊಳಿಸಲು ಅರ್ಹವೆಂದು ಪರಿಗಣಿಸಬಹುದು’ಎಂದು ಎನ್‌ಎಂಸಿ ಹೇಳಿದೆ.

ಉಕ್ರೇನ್‌ನ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ಭಾರತದ ನೂರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಬಹುದು ಎಂದು ಎನ್‌ಎಂಸಿ ಹೇಳಿದೆ.

‘ಭಾರತದಲ್ಲಿ ನೋಂದಾವಣೆ ಬಯಸುವ ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ನಡೆಸುವ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ(ಎಫ್‌ಎಂಜಿಇ)ಯಲ್ಲಿ ಉತ್ತೀರ್ಣರಾಗಬೇಕೆಂಬುದನ್ನು ರಾಜ್ಯ ವೈದ್ಯಕೀಯ ಮಂಡಳಿಗಳು ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಯು ಮಾನದಂಡಗಳನ್ನು ಪೂರೈಸಿದರೆ, 12 ತಿಂಗಳ ಇಂಟರ್ನ್‌ಶಿಪ್ ಅಥವಾ ಉಳಿದ ಅವಧಿಗೆ ತಾತ್ಕಾಲಿಕ ನೋಂದಣಿಗೆ ರಾಜ್ಯ ವೈದ್ಯಕೀಯ ಮಂಡಳಿಗಳು ಸಂದರ್ಭಾನುಸಾರ ಅನುಮತಿ ನೀಡಬಹುದು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿದೇಶಿ ವೈದ್ಯಕೀಯ ಪದವಿಧರರಿಂದ (ಎಫ್‌ಎಂಜಿ) ತಮ್ಮ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂಬುದನ್ನು ರಾಜ್ಯ ವೈದ್ಯಕೀಯ ಮಂಡಳಿಗಳು ವೈದ್ಯಕೀಯ ಕಾಲೇಜುಗಳಿಂದ ಖಚಿತಪಡಿಸಿಕೊಳ್ಳಬೇಕು ಎಂದು ಎನ್‌ಎಂಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT