ಮಂಗಳವಾರ, ಸೆಪ್ಟೆಂಬರ್ 28, 2021
21 °C
ಲೋಕಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್

ಎಸ್‌ಸಿ, ಎಸ್‌ಟಿ ಹೊರತು ಪಡಿಸಿ ಇತರರ ಜಾತಿಗಣತಿ ಇಲ್ಲ: ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಹೊರತುಪಡಿಸಿ ಇತರ ಜನಸಂಖ್ಯೆಯ ಜಾತಿಗಣತಿಯನ್ನು ನಡೆಸದೆ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ’ ಎಂದು ಲೋಕಸಭೆಗೆ ಮಂಗಳವಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಮಾಹಿತಿ ನೀಡಿದರು.

‘ಮಹಾರಾಷ್ಟ್ರ ಮತ್ತು ಒಡಿಶಾ ಸರ್ಕಾರಗಳು ಮುಂಬರುವ ಜನಗಣತಿಯಲ್ಲಿ ಜಾತಿಯ ಕುರಿತು ವಿವರಗಳನ್ನು ಸಂಗ್ರಹಿಸಲು ಕೋರಿವೆ. ಆದರೆ, ನೀತಿಗೆ ಅನುಗುಣವಾಗಿ ಭಾರತ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೊರತುಪಡಿಸಿ, ಇತರ ಜನಸಂಖ್ಯೆಯ ಜಾತಿವಾರು ಜನಗಣತಿ ಮಾಡದಿರಲು ನಿರ್ಧರಿಸಿದೆ’ ಎಂದು ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಂವಿಧಾನದ ನಿಬಂಧನೆಗಳ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಆಯಾ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಜನಗಣತಿಯಲ್ಲಿ ಜಾತಿಗಳು ಮತ್ತು ಬುಡಕಟ್ಟುಗಳನ್ನು ವಿಶೇಷವಾಗಿ ಸಂವಿಧಾನದ (ಎಸ್‌ಸಿ) ಆದೇಶ 1950ರ ಪ್ರಕಾರ ಮತ್ತು ಸಂವಿಧಾನದ (ಎಸ್‌ಟಿ) ಆದೇಶ 1950 (ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವಂತೆ) ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಸೂಚಿಸಲಾಗಿದೆ’ ಎಂದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರವು 2021ರಲ್ಲಿ ಜನಗಣತಿ ನಡೆಸಲು ಉದ್ದೇಶಿಸಿ 2019ರ ಮಾರ್ಚ್ 28ರಂದು ಭಾರತ ಸರ್ಕಾರದ ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಕೋವಿಡ್‌–19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಜನಗಣತಿ ನಡೆಸುವುದನ್ನು ಮುಂದೂಡಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು