ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂದೋಲನ ವಿಫಲವಾಗದು, ಕಾನೂನು ಹಿಂಪಡೆಯುವವರೆಗೂ 'ಘರ್ ವಾಪಸಿ' ಇಲ್ಲ: ಟಿಕಾಯತ್

Last Updated 7 ಫೆಬ್ರುವರಿ 2021, 15:39 IST
ಅಕ್ಷರ ಗಾತ್ರ

ಚರಖಿ ದಾದ್ರಿ (ಹರಿಯಾಣ) : ‘ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವುದು ‘ಜನಾಂದೋಲನ’. ಇದು ಎಂದಿಗೂ ವಿಫಲವಾಗುವುದಿಲ್ಲ. ರೈತರ ಬೇಡಿಕೆಗಳು ಈಡೇರುವವರೆಗೆ ಮನೆಗೆ ಮರಳುವ ಪ್ರಶ್ನೆಯೇ ಇಲ್ಲ’ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌ ಭಾನುವಾರ ಹೇಳಿದ್ದಾರೆ.

ಇಲ್ಲಿ ಆಯೋಜಿಸಿದ್ದ ಕಿಸಾನ್‌ ಪಂಚಾಯತ್‌ನಲ್ಲಿ ಮಾತನಾಡುತ್ತಾ, ಹೋರಾಟಕ್ಕೆ ‘ಖಾಪ್‌ ಪಂಚಾಯತ್‌’ಗಳು ನೀಡಿರುವ ಬೆಂಬಲವನ್ನು ಅವರು ಶ್ಲಾಘಿಸಿದರು. ‘ರಾಜಾ ಹರ್ಷವರ್ಧನನ ಕಾಲದಿಂದಲೇ ಖಾಪ್‌ ಪಂಚಾಯತ್‌ಗಳು ಸಮಾಜದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾ ಬಂದಿವೆ’ ಎಂದರು.

‘ರೈತರ ಒಗ್ಗಟ್ಟನ್ನು ಮುರಿಯುವ ಪ್ರಯತ್ನಗಳು ಆರಂಭದಲ್ಲೇ ನಡೆದಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ. ರೈತರ ಹೋರಾಟದ ವೇದಿಕೆ ಹಾಗೂ ಪ್ರತಿಭಟನೆಯ ನಾಯಕತ್ವ ಬದಲಾಗುವುದಿಲ್ಲ. ರೈತರೂ ಸಹ ಅವರಿವರ ಮಾತುಗಳಿಗೆ ಕಿವಿಗೊಡದೆ, ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದರು.

ಇದಕ್ಕೂ ಮುನ್ನ ಹರಿಯಾಣ– ರಾಜಸ್ಥಾನ ಗಡಿ ಸಮೀಪದ ನೂಹ್‌ನಲ್ಲಿ ಆಯೋಜಿಸಿದ್ದ ಕಿಸಾನ್ ಮಹಾಪಂಚಾಯತ್‌ನಲ್ಲೂ ಅವರು ಪಾಲ್ಗೊಂಡಿದ್ದರು.

ರೈತ ಆತ್ಮಹತ್ಯೆ

ರೈತ ಪ್ರತಿಭಟನೆ ನಡೆಯುತ್ತಿರುವ ಟಿಕ್ರಿ ಗಡಿಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಹರಿಯಾಣದ ರೈತರೊಬ್ಬರ ಶವವು ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರು ಹರಿಯಾಣದ ಜಿಂದ್‌ನಿಂದ ಪ್ರತಿಭಟನೆ ಬೆಂಬಲಿಸಲು ಬಂದಿದ್ದ ಕರಮ್‌ವೀರ್‌ ಸಿಂಗ್‌ (52) ಎಂದು ಗುರುತಿಸಲಾಗಿದ್ದು, ಇವರು ಬರೆದಿದ್ದಾರೆ ಎನ್ನಲಾದ ಒಂದು ಪತ್ರವೂ ಲಭಿಸಿದೆ. ‘ಆತ್ಮೀಯ ರೈತರೇ, ಮೋದಿ ಸರ್ಕಾರವು ಕಾಲ ತಳ್ಳುತ್ತಲೇ ಇದೆ. ಈ ಕಪ್ಪು ಕಾನೂನುಗಳು ಎಂದು ರದ್ದಾಗುತ್ತವೆ ಎಂಬುದು ಯಾರಿಗೂ ತಿಳಿದಿಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಒಬಾಮಾರಂತೆ ರೈತರನ್ನೂ ಆಹ್ವಾನಿಸಿ

ಭರೂಚ್‌: ‘ಹಿಂದೆ ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ, ತಾವೇ ಅವರಿಗೆ ಚಹಾ ನೀಡಿದ್ದರು. ಅದರಂತೆ ರೈತರನ್ನೂ ಮಾತುಕತೆಗೆ ಆಹ್ವಾನಿಸಿ, ಚಹಾ ಕೊಟ್ಟು, ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು’ ಎಂದು ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ ಹಾಗೂ ಭರೂಚ್‌ನ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯ ಪ್ರಚಾರಾರ್ಥವಾಗಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ನಾನು ಬಡತನದಲ್ಲೇ ಬೆಳೆದವನು ಎಂದು ಪ್ರಧಾನಿ ಹೇಳುತ್ತಾರೆ. ಅದು ನಿಜವಾಗಿದ್ದರೆ ಅವರು ದೇಶದ ಜನರಿಗೆ ಅನ್ನ ಕೊಡುವ ರೈತರ ಸಂಕಷ್ಟಗಳನ್ನೂ ಅರಿಯಬೇಕು. ಯಾರ ಬಗ್ಗೆಯೂ ಕರುಣೆಯೇ ಇಲ್ಲದವರು, ಬಡವರ ಕಣ್ಣಿರಿಗೆ ಕರಗುವುದಿಲ್ಲ. ನಾವು ರೈತರ ಜತೆಗಿದ್ದೇವೆ, ಅವರು ನಮ್ಮ ಅನ್ನದಾತರು’ ಎಂದರು.

ಒಂದೆರಡು ಪ್ರದೇಶಕ್ಕೆ ಸೀಮಿತ

ಗ್ವಾಲಿಯರ್‌: ‘ರೈತರ ಹೋರಾಟವು ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ. ರೈತರ ಜತೆಗೆ ಮಾತುಕತೆಗೆ ಸರ್ಕಾರ ಸಿದ್ಧವಿದೆ. ಶೀಘ್ರದಲ್ಲೇ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು’ ಎಂದು ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಹೇಳಿದರು.

ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್‌ ಮಾಡಿರುವ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ‘ರೈತರ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ. ತನ್ನ ಕೈಯಲ್ಲಿ ಅಧಿಕಾರವಿದ್ದಾಗ ರೈತರಿಗಾಗಿ ಅವರೇನೂ ಮಾಡಿಲ್ಲವೇಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT