ಶುಕ್ರವಾರ, ಅಕ್ಟೋಬರ್ 23, 2020
28 °C
ನೂತನ ಕೃಷಿ ಕಾಯ್ದೆ ಕುರಿತು ಸಮಾಲೋಚನೆ

ಕೃಷಿ ಸಚಿವರು ಗೈರು: ಸಭೆ ಬಹಿಷ್ಕರಿಸಿದ ಪಂಜಾಬ್‌ ರೈತ ಮುಖಂಡರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೂತನ ಕೃಷಿ ಕಾಯ್ದೆಗಳ ಕುರಿತು ಸಮಾಲೋಚನೆ ಉದ್ದೇಶದಿಂದ ಕೃಷಿ ಸಚಿವಾಲಯ ಕರೆದಿದ್ದ ಸಭೆಯನ್ನು ಪಂಜಾಬ್‌ನ ರೈತ ಸಂಘಟೆನೆಗಳು ಬಹಿಷ್ಕರಿಸಿದ ಘಟನೆ ಬುಧವಾರ ನಡೆಯಿತು.

ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಹಾಗೂ ರಾಜ್ಯ ಸಚಿವರು ಈ ಸಭೆಗೆ ಹಾಜರಾಗದೇ ಇರುವುದನ್ನು ಖಂಡಿಸಿ, 29 ರೈತ ಸಂಘಟನೆಗಳ ಮುಖಂಡರು ಇಲ್ಲಿನ ಕೃಷಿ ಭವನದಲ್ಲಿ ಆಯೋಜಿಸಿದ್ದ ಸಭೆಯಿಂದ ಹೊರ ನಡೆದರು.

ಆಜಾದ್ ಕಿಸಾನ್‌ ಸಂಘಟನೆಯ ಹರ್ಜಿಂದರ್‌ ಸಿಂಗ್‌, ಭಾರತಿ ಕಿಸಾನ್‌ ಯೂನಿಯನ್‌ ಅಧ್ಯಕ್ಷ ಜೋಗಿಂದರ್‌ ಸಿಂಗ್‌ ಮತ್ತಿತರರ ನೇತೃತ್ವದಲ್ಲಿ ಕೃಷಿ ಭವನದ ಮುಂದೆ ಪ್ರತಿಭಟಿಸಿದ ರೈತ ಮುಖಂಡರು, ನೂತನ ಕೃಷಿ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆ ಸಭೆಯನ್ನು ಆಯೋಜಿಸಲಾಗಿತ್ತು. ರೈತ ಸಂಘಟನೆಗಳ 30 ಜನ ಪ್ರತಿನಿಧಿಗಳು ಪಂಜಾಬ್‌ನಿಂದ ಬಸ್‌ನಲ್ಲಿ ಬಂದಿದ್ದರು. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮಾರ್ಗಸೂಚಿ ಇದ್ದರೂ, ಸಭೆಗೆ ಬಂದಿದ್ದ ರೈತ ಮುಖಂಡರು ಮಾಸ್ಕ್‌ ಧರಿಸಿರಲಿಲ್ಲ.

‘ನೂತನ ಕಾಯ್ದೆಗಳ ಕುರಿತು ನಮ್ಮ ಅಹವಾಲುಗಳನ್ನು ಆಲಿಸಬೇಕಾದ ಕೇಂದ್ರ ಸಚಿವರು, ರಾಜ್ಯ ಸಚಿವರು ಸಭೆಗೆ ಬಂದಿರಲಿಲ್ಲ. ಸಮರ್ಪಕ ಚರ್ಚೆಯೂ ನಡೆಯಲಿಲ್ಲ’ ಎಂದು ರೈತ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯ ದರ್ಶನ್‌ ಪಾಲ್‌ ಹೇಳಿದರು. ಪಾಲ್‌ ಅವರು ಕ್ರಾಂತಿಕಾರಿ ಕಿಸಾನ್‌ ಯೂನಿಯನ್‌ ಅಧ್ಯಕ್ಷ.

‘ಸಮಾಲೋಚನೆ ಎಂದು ನಮ್ಮನ್ನು ದೆಹಲಿಗೆ ಕರೆಸಲಾಗಿದೆ. ಅತ್ತ, ಪಂಜಾಬ್‌ನ ರೈತರೊಂದಿಗೆ ಸಚಿವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸುತ್ತಿದ್ದಾರೆ. ಇಂಥ ದ್ವಂದ್ವ ನೀತಿ ಯಾಕೆ’ ಎಂದು ಅವರು ಪ್ರಶ್ನಿಸಿದರು.

‘ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷಿ ಸಚಿವಾಲಯದ ಕಾರ್ಯದರ್ಶಿ ಸಂಜಯ್‌ ಅಗ್ರವಾಲ್‌ ಅವರಿಂದ ನಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದ ಕಾರಣ ಸಭೆಯನ್ನು ಬಹಿಷ್ಕರಿಸಿದೆವು’ ಎಂದೂ ಅವರು ಹೇಳಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು