ಭಾನುವಾರ, ಅಕ್ಟೋಬರ್ 24, 2021
25 °C

ಅಲ್ಪ ಉಡುಗೆ ಧರಿಸುವುದರಿಂದ ಯಾರೂ ಶ್ರೇಷ್ಠರಾಗುವುದಿಲ್ಲ: ಹೃದಯ ನಾರಾಯಣ್ ದೀಕ್ಷಿತ್

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: 'ಜನರು ಎಷ್ಟು ಕಡಿಮೆ ಬಟ್ಟೆ ಧರಿಸುತ್ತಾರೆ ಎನ್ನುವುದನ್ನು ಆಧರಿಸಿ ಗೌರವಿಸಬಹುದಾದರೆ ನಟಿ ರಾಖಿ ಸಾವಂತ್ ಅವರು ಮಹಾತ್ಮ ಗಾಂಧಿಗಿಂತಲೂ ದೊಡ್ಡವರಾಗುತ್ತಿದ್ದರು' ಎಂದು ಉತ್ತರಪ್ರದೇಶ ವಿಧಾನಸಭಾ ಸ್ಪೀಕರ್ ಹೃದಯ ನಾರಾಯಣ್ ದೀಕ್ಷಿತ್ ತಿಳಿಸಿದ್ದಾರೆ.

ಉನ್ನಾವೋ ಜಿಲ್ಲೆಯ ಬಂಗರ್ಮೌ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬಿಜೆಪಿಯ 'ಪ್ರಬುದ್ಧ ಸಮ್ಮೇಳನ'ದಲ್ಲಿ ಸ್ಪೀಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ಯಾವುದೇ ವಿಷಯದ ಕುರಿತು ಪುಸ್ತಕ ಬರೆಯುವ ಮೂಲಕ ಯಾರೂ ಬುದ್ಧಿಜೀವಿಗಳಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಆದರೂ, ಈ ವರೆಗೆ ನಾನು ಕನಿಷ್ಠ 6,000 ಪುಸ್ತಕಗಳನ್ನು ಓದಿದ್ದೇನೆ' ಎಂದು ದೀಕ್ಷಿತ್ ಹೇಳಿದರು.

'ಗಾಂಧೀಜಿ ಅಲ್ಪ ಉಡುಗೆ ಧರಿಸುತ್ತಿದ್ದರು. ಅವರು ಕೇವಲ ಧೋತಿ ಕಟ್ಟುತ್ತಿದ್ದರು. ದೇಶವು ಅವರನ್ನು ಬಾಪು ಎಂದು ಕರೆಯಿತು. ಯಾರಾದರೂ ತಮ್ಮ ಬಟ್ಟೆಗಳನ್ನು ಕಡಿಮೆ ಮಾಡಿದರೆ ಶ್ರೇಷ್ಠರಾಗಲು ಸಾಧ್ಯವಾದರೆ, ರಾಖಿ ಸಾವಂತ್ ಮಹಾತ್ಮ ಗಾಂಧಿಗಿಂತ ದೊಡ್ಡವರಾಗುತ್ತಿದ್ದರು' ಎಂದು ತಿಳಿಸಿದ್ದಾರೆ.

ಅವರ ಭಾಷಣದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಅವರು ಹಿಂದಿಯಲ್ಲಿ ಸ್ಪಷ್ಟೀಕರಣ ನೀಡುವ ಟ್ವೀಟ್‌ಗಳನ್ನು ಮಾಡಿದ್ದಾರೆ.

'ಸಾಮಾಜಿಕ ಮಾಧ್ಯಮದಲ್ಲಿರುವ ಕೆಲವು ಸ್ನೇಹಿತರು ನನ್ನ ಭಾಷಣದ ವಿಡಿಯೋದ ಕ್ಲಿಪ್ ಅನ್ನು ಬೇರೆ ಅರ್ಥದಲ್ಲಿ ತೋರಿಸುತ್ತಿದ್ದಾರೆ. ಇದು ಉನ್ನಾವೋದಲ್ಲಿ ನಡೆದ 'ಪ್ರಬುದ್ಧ ಸಮ್ಮೇಳನ'ದಲ್ಲಿ ನನ್ನ ಭಾಷಣದ ಭಾಗವಾಗಿತ್ತು, ಇದರಲ್ಲಿ ಸಮ್ಮೇಳನದ ಸಂಚಾಲಕರು ನನ್ನನ್ನು 'ನಾನು ಪ್ರಬುದ್ಧ ಬರಹಗಾರ' ಎಂದು ಪರಿಚಯಿಸಿದರು' ಎಂದಿದ್ದಾರೆ.

'ಕೆಲವು ಪುಸ್ತಕಗಳನ್ನು ಬರೆಯುವ ಮೂಲಕ ಯಾರೂ ಬುದ್ಧಿಜೀವಿಗಳಾಗುವುದಿಲ್ಲ ಎಂಬ ಅಂಶವನ್ನು ನಾನು ಒತ್ತಿ ಹೇಳಿದೆ. ಮಹಾತ್ಮ ಗಾಂಧಿಯವರು ಅಲ್ಪ ಉಡುಗೆ ಧರಿಸುತ್ತಿದ್ದರು. ದೇಶವು ಅವರನ್ನು 'ಬಾಪು' ಎಂದು ಕರೆಯಿತು. ಆದರೆ, ರಾಖಿ ಸಾವಂತ್ ಗಾಂಧೀಜಿ ಆಗುತ್ತಾರೆ ಎಂದರ್ಥವಲ್ಲ' ದೀಕ್ಷಿತ್ ಹೇಳಿದರು.

'ಸ್ನೇಹಿತರೇ, ನನ್ನ ಭಾಷಣವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ' ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು