ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದ್ದೀರೆಂದು ತಿಳಿಯದೆ ರಕ್ಷಣೆ ನೀಡಲಾಗಲ್ಲ: ಪರಮ್‌ ಬೀರ್‌ ಸಿಂಗ್‌ಗೆ ಸುಪ್ರೀಂ

ಸುಲಿಗೆ ಪ್ರಕರಣ: 'ಘೋಷಿತ ಅಪರಾಧಿ' ಮುಂಬೈ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌ಗೆ ಸೂಚನೆ
Last Updated 18 ನವೆಂಬರ್ 2021, 9:26 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ಮಾಜಿ ಪೊಲೀಸ್‌ ಕಮಿಷನರ್‌, ಐಪಿಎಸ್‌ ಅಧಿಕಾರಿ ಪರಮ್‌ ಬೀರ್‌ ಸಿಂಗ್‌ ತಾನಿರುವ ಸ್ಥಳವನ್ನು ಬಹಿರಂಗಪಡಿಸಬೇಕು ಎಂದು ಸುಪ್ರೀಂಕೋರ್ಟ್‌ ಗುರುವಾರ ಸೂಚಿಸಿದೆ.

‘ನೀವು ಎಲ್ಲಿದ್ದೀರಿ ಎಂಬುದು ನಮಗೆ ತಿಳಿಯುವವರೆಗೆ ನಿಮಗೆ ಯಾವುದೇ ರೀತಿಯ ರಕ್ಷಣೆ ನೀಡುವುದಿಲ್ಲ, ಜತೆಗೆ ವಿಚಾರಣೆಯನ್ನೂ ನಡೆಸುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌, ಎಂ.ಎಂ. ಸುಂದ್ರೇಶ್‌ ಅವರ ಪೀಠ ತಿಳಿಸಿತು.

ಸಿಂಗ್‌ ಅವರು ಎಲ್ಲಿದ್ದಾರೆ ಎಂಬುದನ್ನು ತಿಳಿಸುವಂತೆ ಅವರ ಪರ ವಕೀಲರಿಗೆ ಸೂಚಿಸಿದ ಪೀಠ ಪ್ರಕರಣದ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.

‘ನೀವು ನಮ್ಮಿಂದ ರಕ್ಷಣೆ ಬಯಸುತ್ತಿದ್ದೀರಿ, ಆದರೆ ನೀವು ಎಲ್ಲಿದ್ದೀರಿ ಎಂಬುದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ನೀವು ವಿದೇಶದಲ್ಲಿದ್ದು ವಕೀಲರ ಮೂಲಕ ಅರ್ಜಿ ಸಲ್ಲಿಸಿರಬಹುದು. ಹಾಗಿದ್ದಲ್ಲಿ, ನಾವು ನಿಮ್ಮ ಪರ ಆದೇಶ ನೀಡಿದರೆ ಮಾತ್ರ ನೀವು ಭಾರತಕ್ಕೆ ಬರುತ್ತೀರಿ. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ. ಹಾಗಾಗಿ ನೀವು ಎಲ್ಲಿದ್ದೀರಿ ಎಂಬುದು ನಮಗೆ ಮನದಟ್ಟಾಗುವ ತನಕ ನಿಮಗೆ ಯಾವುದೇ ರೀತಿಯ ರಕ್ಷಣೆ ನೀಡಲಾಗದು. ಅಂಥೆಯೇ ನಿಮ್ಮ ಪ್ರಕರಣದ ವಿಚಾರಣೆಯನ್ನೂ ನಡೆಸಲಾಗದು’ ಎಂದು ಪೀಠ ತಿಳಿಸಿತು.

ಸುಲಿಗೆ ಪ್ರಕರಣದಲ್ಲಿ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪರಮ್‌ ಬೀರ್‌ ಸಿಂಗ್ ಅವರನ್ನು ‘ಘೋಷಿತ ಅಪರಾಧಿ’ ಎಂದು ಬುಧವಾರಷ್ಟೇ ಘೋಷಿಸಿದೆ.

ಸಿಂಗ್ ಕೊನೆಯದಾಗಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಕಚೇರಿಗೆ ಹಾಜರಾಗಿದ್ದರು, ಬಳಿಕ ಅವರು ರಜೆಯ ಮೇಲೆ ತೆರಳಿದ್ದಾರೆ. ಅವರು ಈಗ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ರಾಜ್ಯ ಪೊಲೀಸರು ಕಳೆದ ತಿಂಗಳು ಬಾಂಬೆ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT