ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿಗಳ ಬಳಕೆಗೆ ಸಂಪೂರ್ಣ ನಿಷೇಧವಿಲ್ಲ: ಸುಪ್ರೀಂಕೋರ್ಟ್‌

‘ಬೇರಿಯಂ ಲವಣಗಳನ್ನು ಹೊಂದಿರುವ ಪಟಾಕಿಗಳ ಬಳಕೆಗೆ ಮಾತ್ರ ನಿಷೇಧ’
Last Updated 29 ಅಕ್ಟೋಬರ್ 2021, 16:01 IST
ಅಕ್ಷರ ಗಾತ್ರ

ನವದೆಹಲಿ: ಪಟಾಕಿಗಳ ಬಳಕೆಗೆ ಸಂಪೂರ್ಣ ನಿಷೇಧವಿಲ್ಲ. ಆದರೆ ಬೇರಿಯಂ ಲವಣಾಂಶ ಹೊಂದಿರುವ ಪಟಾಕಿಗಳಿಗೆ ಮಾತ್ರ ನಿಷೇಧವಿದೆ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ.

ನಿಷೇಧಕ್ಕೆ ಸಂಬಂಧಿಸಿ ಯಾವುದೇ ಪ್ರಾಧಿಕಾರವು ಹೊರಡಿಸಿದ ನಿರ್ದೇಶನಗಳನ್ನು ಉಲ್ಲಂಘಿಸುವುದನ್ನು ಮತ್ತು ಆಚರಣೆಯ ನೆಪದಲ್ಲಿ ನಿಷೇಧಿತ ಪಟಾಕಿಗಳ ಬಳಕೆಗೂ ನ್ಯಾಯಾಲಯ ಅನುಮತಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಎ.ಎಸ್‌. ಬೋಪಣ್ಣ ಅವರ ಪೀಠ ಹೇಳಿದೆ.

ಸಂಭ್ರಮಾಚರಣೆಯ ನೆಪದಲ್ಲಿ ಇತರರ ಆರೋಗ್ಯ ವಿಚಾರದಲ್ಲಿ ಸಮಸ್ಯೆ ಉಂಟು ಮಾಡಬಾರದು ಎಂದೂ ಪೀಠ ಪ್ರತಿಪಾದಿಸಿದೆ.

ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಂಭ್ರಮಾಚರಣೆಯ ನೆಪದಲ್ಲಿ ಇತರರ ಆರೋಗ್ಯದ ಹಕ್ಕನ್ನು ಉಲ್ಲಂಘಿಸಲು ಯಾರಿಗೂ ಅನುಮತಿ ನೀಡುವುದಿಲ್ಲ. ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳ ಅಮೂಲ್ಯ ಜೀವಗಳೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ಪಟಾಕಿಗಳ ಬಳಕೆಗೆ ಸಂಪೂರ್ಣ ನಿಷೇಧವಿಲ್ಲ. ಆದರೆ ಇಲ್ಲಿ ಸೂಚಿಸಿದ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಇವು ಆರೋಗ್ಯಕ್ಕೆ ಹಾನಿಕರವಾಗಿವೆ. ನಾಗರಿಕರು, ವಿಶೇಷವಾಗಿ ಹಿರಿಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಪಟಾಕಿಗಳು ಪರಿಣಾಮ ಬೀರುತ್ತವೆ’ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪಟಾಕಿಗಳ ನಿಷೇಧವನ್ನು ಜಾರಿಗೊಳಿಸುವಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳು ಎಸಗುವ ಯಾವುದೇ ಲೋಪವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್‌ ಎಚ್ಚರಿಸಿದೆ.

ನಿಷೇಧಿತ ಪಟಾಕಿಗಳ ತಯಾರಿಕೆ, ಬಳಕೆ ಮತ್ತು ಮಾರಾಟದ ಕುರಿತು ನ್ಯಾಯಾಲಯ ನೀಡಿರುವ ನಿರ್ದೇಶನಗಳ ಕುರಿತು ಜನರಿಗೆ ಅರಿವು ಮೂಡಿಸಲು ಎಲೆಕ್ಟ್ರಾನಿಕ್‌, ಮುದ್ರಣ ಮಾಧ್ಯಮಗಳು ಮತ್ತು ಸ್ಥಳೀಯ ಕೇಬಲ್‌ ಸೇವೆಗಳ ಮೂಲಕ ಸೂಕ್ತ ಪ್ರಚಾರ ನೀಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT