ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯೆ ನಡೆಯುತ್ತಿದ್ದರೂ ನೆರವಿಗೆ ಬಾರದ ಜನ: ನಾಗರಾಜು ಪತ್ನಿ ಸುಲ್ತಾನಾ ಕಣ್ಣೀರು

ಅಕ್ಷರ ಗಾತ್ರ

ಹೈದರಾಬಾದ್: ಕಣ್ಣೆದುರೇ ಪತಿ ನಾಗರಾಜು ಅವರ ಮರ್ಯಾದೆಗೇಡು ಹತ್ಯೆ, ನೆರವಿಗೆ ಬಾರದೆ ಪೋಟೊ, ವಿಡಿಯೊ ತೆಗೆಯುತ್ತಿದ್ದ ಜನರನ್ನು ಕಂಡು ಹೈದರಾಬಾದ್‌ನ ಮಹಿಳೆ ಸೈಯದ್ ಆಶ್ರಿನ್ ಸುಲ್ತಾನಾ ಅಕ್ಷರಶಃ ಬೇಸತ್ತಿದ್ದಾರೆ. ಈ ಕುರಿತಂತೆ ಇಂಡಿಯಾ ಟುಡೆ ಜೊತೆ ಮಾತನಾಡಿರುವ ಅವರು, ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕರ ಸ್ಪಂದನಾರಹಿತ ನಡವಳಿಕ ಬಗ್ಗೆ ಕಿಡಿಕಾರಿದ್ದಾರೆ.

ನನ್ನ ಪತಿಯ ಹತ್ಯೆ ನಡೆದು ಬಹಳ ಸಮಯದ ಬಳಿಕ ಪೊಲೀಸರು ಸ್ಥಳಕ್ಕೆ ಬಂದರು. ಅಷ್ಟೊತ್ತಿಗಾಗಲೇ ದಾಳಿ ನಡೆಸಿದ್ದ ನನ್ನ ಸಹೋದರ ಮತ್ತು ಆತನ ಸಹಚರ ಬಹಳ ದೂರ ಓಡಿಹೋಗಿದ್ದರು. ಪತಿಯು ಕೊನೆಯುಸಿರೆಳೆದಿದ್ದರು ಎಂದು ಸುಲ್ತಾನಾ ಹೇಳಿದ್ದಾರೆ.

‘ನಡುರಸ್ತೆಯಲ್ಲಿ ನನ್ನ ಪತಿ ಮೇಲೆ 15–20 ನಿಮಿಷಗಳ ಕಾಲ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದರು. ಸುತ್ತಲೂ ಓಡಾಡುತ್ತಿದ್ದ ಜನ ಫೋಟೊ, ವಿಡಿಯೊ ತೆಗೆದುಕೊಂಡರೇ ಹೊರತು ಯಾರೊಬ್ಬರೂ ನೆರವಿಗೆ ಧಾವಿಸಲಿಲ್ಲ. ನನ್ನ ಪತಿ ಕೊನೆಯುಸಿರು ಎಳೆದ ಮೇಲೆ ಜನ ಸುತ್ತುವರಿದರು. ಪೊಲೀಸರು ಅರ್ಧ ಗಂಟೆ ಬಳಿಕ ಸ್ಥಳಕ್ಕೆ ಬಂದರು’ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಹೃದಯ ವಿದ್ರಾವಕ

ನಾನು ಮತ್ತು ನನ್ನ ಪತಿ ಗುರುವಾರ ಸ್ಕೂಟಿಯಲ್ಲಿ ರಸ್ತೆ ದಾಟುತ್ತಿದ್ದೆವು. ಆ ಸಂದರ್ಭ ದಿಢೀರನೆ ಅಡ್ಡಗಟ್ಟಿದ ನನ್ನ ಸಹೋದರ ಸೈಯದ್ ಮೊಬಿನ್ ಅಹಮ್ಮದ್ ಮತ್ತು ಆತನ ಸಹಚರ ಮೊಹಮ್ಮದ್ ಮಸೂದ್ ಅಹಮ್ಮದ್ ಕಬ್ಬಿಣದ ಸರಳಿನಿಂದ ನನ್ನ ಪತಿ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದರು. ಪತಿಯನ್ನು ನನ್ನ ಕುಟುಂಬದವರೇ ಕೊಂದ ಹೃದಯ ವಿದ್ರಾವಕ ಘಟನೆಯನ್ನು ಕಂಡು ದಿಕ್ಕುತೋಚದಂತಾದೆ. ಸದಾ ಗಿಜಿಗುಡುವ ಹೈದರಾಬಾದ್‌ನ ರಸ್ತೆಯಲ್ಲಿ ವಾಹನಗಳಲ್ಲಿ ಹೋಗುತ್ತಿದ್ದ ಜನ ಮತ್ತು ದಾರಿಹೋಕರಲ್ಲಿ ಯಾರೊಬ್ಬರೂ ನೆರವಿಗೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

‘ಆ ಸಂದರ್ಭ ನಾನು ಒಂಟಿಯಾಗಿದ್ದೆ. ನನ್ನ ಸಹೋದರ ಹೋದ ಬಳಿಕವೂ ಯಾರೊಬ್ಬರೂ ನೆರವಿಗೆ ಬರಲಿಲ್ಲ. ನನ್ನ ಗಂಡ ತಲೆಗೆ ಪೆಟ್ಟು ತಿಂದು ಸಾಯುತ್ತಿದ್ದನ್ನು ಪಕ್ಕದಲ್ಲಿದ್ದವರು ಸುಮ್ಮನೆ ನಿಂತು ನೋಡಿದರು. ಈ ಸಮಾಜದಲ್ಲಿ ಒಳ್ಳೆಯವರಿಲ್ಲ’ಎಂದು ಸುಲ್ತಾನಾ ಅಳಲು ತೋಡಿಕೊಂಡರು.

ಸಹಾಯಕ್ಕಾಗಿ ಕೂಗಿದರೂ ಜನ ನಿರ್ಲಕ್ಷಿಸಿದರು. ನನಗೆ ಸಹಾಯ ಸಿಕ್ಕಿದ್ದರೆ ನನ್ನ ಪತಿಯನ್ನು ಬದುಕಿಸಿಕೊಳ್ಳಬಹುದಿತ್ತು ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ.

ಹತ್ಯೆಗೀಡಾದ ಬಿ ನಾಗರಾಜು (25) ಸಿಕಂದರಾಬಾದ್‌ನ ಮರ್ರೆಡ್‌ಪಲ್ಲಿ ನಿವಾಸಿಯಾಗಿದ್ದು, ಓಲ್ಡ್ ಸಿಟಿಯ ಮಲಕ್‌ಪೇಟ್‌ನಲ್ಲಿರುವ ಜನಪ್ರಿಯ ಕಾರ್ ಶೋರೂಮ್‌ನಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ನಾಗರಾಜು ಮತ್ತು ಸುಲ್ತಾನಾ ಬಹಳ ಕಾಲದಿಂದ ಪ್ರೀತಿಸುತ್ತಿದ್ದರು. ಈ ವರ್ಷದ ಜನವರಿಯಲ್ಲಿ ಅವರು ಆರ್ಯ ಸಮಾಜದ ಮಂದಿರದಲ್ಲಿ ವಿವಾಹವಾಗಿದ್ದರು.

ಆದರೆ, ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರಿಂದ ಸುಲ್ತಾನಾ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ನಾಗರಾಜು ಅವರದ್ದು ಮರ್ಯಾದೆಗೇಡು ಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂದಾಳಿಕೋರರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT