ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ | ನಮ್ಮ ಆದೇಶವೇ ಪಾಲನೆಯಾಗುತ್ತಿಲ್ಲ: ಸುಪ್ರೀಂ ಕೋರ್ಟ್‌ ಅಸಮಾಧಾನ

Last Updated 3 ಫೆಬ್ರುವರಿ 2023, 2:14 IST
ಅಕ್ಷರ ಗಾತ್ರ

ನವದೆಹಲಿ : ‘ನಾವು ಆದೇಶ ನೀಡಿದ್ದರೂ ಕೂಡ ದ್ವೇಷ ಭಾಷಣದ ವಿರುದ್ಧ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಹೆಚ್ಚಿನ ನಿರ್ದೇಶನಗಳನ್ನು ನೀಡುವಂತೆ ಕೇಳುವುದರಿಂದ ನಾವು ಪದೇ ಪದೇ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ಹಿಂದೂ ಜನ ಆಕ್ರೋಶ ಮೋರ್ಚಾವು ಇದೇ 5ರಂದು ಮುಂಬೈಯಲ್ಲಿ ನಡೆಸಲು ಉದ್ದೇಶಿಸಿರುವ ರ‍್ಯಾಲಿಯ ಮೇಲೆ ನಿರ್ಬಂಧ ಹೇರುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರ ಪರ ವಕೀಲೆಯೊಬ್ಬರು ಕೋರಿದ್ದರು.

‘ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ನಿರ್ದೇಶನದ ಮೇರೆಗೆ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌, ಅನಿರುದ್ಧ ಬೋಸ್‌ ಮತ್ತು ಹೃಷಿಕೇಶ್‌ ರಾಯ್‌ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ.

‘ಈ ವಿಚಾರದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ. ನ್ಯಾಯಾಲಯವು ಪ್ರತಿ ಬಾರಿಯೂ ಇಂತಹ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ. ಇದನ್ನು ನೀವು ಅರ್ಥಮಾಡಿಕೊಳ್ಳಬೇಕು. ಈ ವಿಚಾರವಾಗಿ ಈಗಾಗಲೇ ಆದೇಶವೊಂದನ್ನು ಹೊರಡಿಸಲಾಗಿದೆ. ಅದರಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ತಿಳಿಸಲಾಗಿದೆ. ದೇಶದಾದ್ಯಂತ ರ‍್ಯಾಲಿಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ರದ್ದುಪಡಿಸುವಂತೆ ಕೋರಿ ಪ್ರತಿ ಬಾರಿಯೂ ಅರ್ಜಿ ಸಲ್ಲಿಸಿದರೆ ಅವುಗಳನ್ನೆಲ್ಲಾ ಇತ್ಯರ್ಥಪಡಿಸುವುದಾದರೂ ಹೇಗೆ’ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.

‘ಕೆಲ ದಿನಗಳ ಹಿಂದೆ ಇಂತಹದ್ದೇ ರ‍್ಯಾಲಿಯೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ 10 ಸಾವಿರ ಮಂದಿ ಪಾಲ್ಗೊಂಡಿದ್ದರು. ಮುಸ್ಲಿಂ ಸಮುದಾಯದವರ ಮೇಲೆ ಆರ್ಥಿಕ ಹಾಗೂ ಸಾಮಾಜಿಕ ಬಹಿಷ್ಕಾರ ಹೇರುವ ಕುರಿತ ನಿರ್ಧಾರವನ್ನು ಆ ರ‍್ಯಾಲಿಯಲ್ಲಿ ಕೈಗೊಳ್ಳಲಾಗಿತ್ತು’ ಎಂದು ಅರ್ಜಿದಾರರ ಪರ ವಕೀಲೆ, ನ್ಯಾಯಪೀಠಕ್ಕೆ ತಿಳಿಸಿದರು.

‘ಮಹಾರಾಷ್ಟ್ರ ಸರ್ಕಾರದ ಪರ ವಕೀಲರಿಗೆ ಅರ್ಜಿಯ ಪ್ರತಿಯೊಂದನ್ನು ಕೊಡಿ. ನಾವು ಶುಕ್ರವಾರ ನಿಮ್ಮ ಅರ್ಜಿಯನ್ನು ಮಾತ್ರ ವಿಚಾರಣೆಗೆ ಒಳಪಡಿಸುತ್ತೇವೆ’ ಎಂದು ನ್ಯಾಯಪೀಠ ಹೇಳಿತು.

‘ನಿವೃತ್ತರಿಗೆ ಸಿಗುವ ಸೌಕರ್ಯ ಸ್ವಯಂ ನಿವೃತ್ತಿ ಪಡೆದವರಿಗೆ ಅನ್ವಯಿಸದು’

‘ಸೇವಾ ಅವಧಿ ಪೂರೈಸಿ ನಿವೃತ್ತರಾದವರಿಗೆ ಸಿಗುವ ಸೌಕರ್ಯಗಳು ಸ್ವ ಇಚ್ಛೆಯಿಂದ ನಿವೃತ್ತಿ ಪಡೆದವರಿಗೆ ಅನ್ವಯಿಸುವುದಿಲ್ಲ. ಅವರು ಸಮಾನ ಸೌಕರ್ಯ ಕೇಳುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ವೇತನ ಶ್ರೇಣಿ ಪರಿಷ್ಕರಣೆಯ ಲಾಭ ಸ್ವಯಂ ನಿವೃತ್ತರಿಗೆ ಅನ್ವಯವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಆದೇಶಿಸಿತ್ತು. ಇದರ ವಿರುದ್ಧ ಕೆಲ ನೌಕರರು ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಎಸ್‌.ರವೀಂದ್ರ ಭಟ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, ಹೈಕೋರ್ಟ್‌ ಆದೇಶ ಎತ್ತಿಹಿಡಿದಿದೆ.

ವಿಚಾರಣಾಧೀನ ಕೈದಿಗಳ ಬಿಡುಗಡೆ ವಿಳಂಬ: ಮಾರ್ಗಸೂಚಿ

ನವದೆಹಲಿ (ಪಿಟಿಐ): ಜಾಮೀನು ಪಡೆದ ಬಳಿಕವೂ ಹಲವಾರು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿದ್ದಾರೆ. ತಿಂಗಳೊಳಗೆ ಬಾಂಡ್‌ಗಳನ್ನು ಸಲ್ಲಿಸದಿದ್ದರೆ ವಿಧಿಸಲಾದ ಷರತ್ತುಗಳನ್ನು ಮಾರ್ಪಡಿಸುವಂತೆ ಸಂಬಂಧಪಟ್ಟ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಅಭಯ್ ಎಸ್.ಓಕಾ ಅವರ ಪೀಠ, ಆರೋಪಿ ಅಥವಾ ಅಪರಾಧಿಯ ಬಿಡುಗಡೆ ವಿಳಂಬಕ್ಕೆ ಸ್ಥಳೀಯ ಭದ್ರತಾ ಠೇವಣಿ ಒತ್ತಾಯವೂ ಒಂದು ಕಾರಣ ಎಂಬುದನ್ನು ನ್ಯಾಯಾಲಯ ಗಮನಿಸಿದ್ದು, ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಸ್ಥಳೀಯ ಶ್ಯೂರಿಟಿ ಷರತ್ತು ವಿಧಿಸುವಂತಿಲ್ಲ ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT