ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಯಿಡಾದಲ್ಲಿ ಧರೆಗೆ ಉರುಳಿದ ಗೋಪುರಗಳು: ನಿಯಮಬಾಹಿರ ಕಟ್ಟಡ ಕ್ಷಣದಲ್ಲಿ ನೆಲಸಮ

ಸುಪ್ರೀಂ ಕೋರ್ಟ್‌ ಆದೇಶದಂತೆ ಕಾರ್ಯಾಚರಣೆ
Last Updated 28 ಆಗಸ್ಟ್ 2022, 20:42 IST
ಅಕ್ಷರ ಗಾತ್ರ

ನೊಯಿಡಾ: ಕಾನೂನುಬಾಹಿರವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಮೇಲೆ ಇಲ್ಲಿನ ಸೂಪರ್‌ಟೆಕ್ ಸಂಸ್ಥೆಯ ಅವಳಿ ಗೋಪುರಗಳನ್ನು ಭಾನುವಾರ ಮಧ್ಯಾಹ್ನ 2.30ಕ್ಕೆ ನೆಲಸಮ ಮಾಡಲಾಯಿತು. 32 ಅಂತಸ್ತಿನ ‘ಅಪೆಕ್ಸ್’ ಹಾಗೂ 39 ಅಂತಸ್ತಿನ ‘ಸಯಾನ್’ ಹೆಸರಿನ ಗೋಪುರಗಳು ಕ್ಷಣಾರ್ಧದಲ್ಲಿ ಧರೆಗುರುಳಿದವು. ಕೆಲವು ನಿಮಿಷಗಳವರೆಗೆ ದಟ್ಟವಾದ ದೂಳು ಹಾಗೂ ಹೊಗೆ ಆವರಿಸಿತ್ತು.

ಸಮೀಪದ ಕಟ್ಟಡಗಳ ಕೆಲವು ಕಾಂಪೌಂಡ್‌ಗಳು ಹಾಗೂ ಕಿಟಕಿಗಳು ಬಿರುಕುಬಿಟ್ಟಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 80 ಸಾವಿರ ಟನ್ ಕಟ್ಟಡ ತ್ಯಾಜ್ಯ ಉಂಟಾಗಿದ್ದು, ಅದನ್ನು ಸಾಗಿಸಲು ಮೂರು ತಿಂಗಳು ಬೇಕಾಗುತ್ತದೆ.

ಕಟ್ಟಡಗಳ ನೆಲಸಮಕ್ಕಾಗಿ ವ್ಯವಸ್ಥಿತವಾದ ಯೋಜನೆಯನ್ನು ರೂಪಿಸಲಾಗಿತ್ತು. ಕಟ್ಟಡದ ಸುತ್ತಮುತ್ತ ವಾಸವಿದ್ದ ಸುಮಾರು 5 ಸಾವಿರ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿತ್ತು. ಮೂರು ಸಾವಿರ ವಾಹನಗಳು, 200ಕ್ಕೂ ಹೆಚ್ಚು ಸಾಕುಪ್ರಾಣಿಗಳನ್ನು ಘಟನಾ ಸ್ಥಳದಿಂದ ದೂರಕ್ಕೆ ಕಳುಹಿಸಲಾಗಿತ್ತು.

ಸೂಪರ್‌ಟೆಕ್ ರಿಯಲ್ ಎಸ್ಟೇಟ್ ಕಂಪನಿಯು ಮೂಲ ಯೋಜನೆ ಪ್ರಕಾರ ಕಟ್ಟಡ ನಿರ್ಮಿಸಿಲ್ಲ ಎಂದು ಪ್ರತಿಪಾದಿಸಿದ್ದ ನಿವಾಸಿಗಳ ಸಂಘವು ಇದಕ್ಕಾಗಿ ಒಂಬತ್ತು ವರ್ಷಗಳಿಂದ ಕಾನೂನು ಹೋರಾಟ ನಡೆಸಿತ್ತು. ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್, 2021ರ ಆಗಸ್ಟ್‌ 31ರಂದು ನೆಲಸಮಕ್ಕೆ ಆದೇಶಿಸಿತ್ತು.

‘ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪಾಠ’
ನವದೆಹಲಿ: ಸೂಪರ್‌ಟೆಕ್ ಅವಳಿ ಗೋಪುರ ನೆಲಸಮ ಪ್ರಕರಣವು ರಿಯಲ್ ಎಸ್ಟೇಟ್ ಉದ್ಯಮದ ಎಲ್ಲರಿಗೂ ಪಾಠ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ನಿಯಮಾವಳಿಗಳನ್ನು ಉಲ್ಲಂಘಿಸಿದರೆ, ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂಬ ಸಂದೇಶವನ್ನು ಈ ಪ್ರಕರಣ ರವಾನಿಸಿದೆ ಎಂದು ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಪ್ರಾಧಿಕಾರಗಳು ರೂಪಿಸಿರುವ ನಿಯಮಾವಳಿಗಳನ್ನು ಬಹುತೇಕ ಡೆವಲಪರ್‌ಗಳು ಪಾಲಿಸುತ್ತಾರೆ. ಆದರೆ, ಯಾರು ನಿಯಮಗಳನ್ನು ಪಾಲಿಸುತ್ತಿಲ್ಲವೋ ಅವರಿಗೆಲ್ಲಾ ಇದು ಎಚ್ಚರಿಕೆ ಗಂಟೆ’ ಎಂದು ಕ್ರೆಡಾಯ್ ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ ಅವರು ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಪಾರದರ್ಶಕ ಹಾಗೂ ಜವಾಬ್ದಾರಿಯುತವನ್ನಾಗಿ ಮಾಡುವ ನಿಟ್ಟಿನಲ್ಲಿ ಕಠಿಣ ಸಂದೇಶ ನೀಡಲಾಗಿದೆ ಎಂದು ನೈಟ್ ಫ್ರಾಂಕ್ ಇಂಡಿಯಾದ ಮುಖ್ಯಸ್ಥ ಶಿಶಿರ್ ಬೈಜಾಲ್ ಅಭಿಪ್ರಾಯಪಟ್ಟಿದ್ದಾರೆ. ‘ವ್ಯಾಜ್ಯ ಮುಕ್ತವಾಗಿದೆಯೇ ಎಂಬುದನ್ನು ಮನೆ ಖರೀದಿಸುವವರು ಹಾಗೂ ಬಿಲ್ಡರ್‌ಗಳು ಎಚ್ಚರಿಕೆಯಿಂದ ಪರಿಶೀಲಿಸಬೇಕು. ರಿಯಲ್ ಎಸ್ಟೇಟ್ ವಲಯದಲ್ಲಿ ನಿರಂತರ ಪಾರದರ್ಶಕತೆ ಅಗತ್ಯ ಎಂಬುದನ್ನು ಈ ಘಟನೆ ಒತ್ತಿ ಹೇಳಿದೆ’ ಎಂದು ಅವರು ಹೇಳಿದ್ದಾರೆ.

ಕಟ್ಟಡ ನೆಲಸಮಕ್ಕೆ ವ್ಯವಸ್ಥಿತ ಯೋಜನೆ
*ನಿವಾಸಿಗಳನ್ನು ಸುರಕ್ಷಿತವಾಗಿ ತೆರವು ಮಾಡಿದ ಸೂಪರ್‌ಟೆಕ್ ಎಮರಾಲ್ಡ್‌ ಕೋರ್ಟ್‌ ನಿವಾಸಿಗಳ ಸಂಘದ ವಿಶೇಷ ಕಾರ್ಯಪಡೆ; ಭಾನುವಾರ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಎಲ್ಲ 15 ಗೋಪುರಗಳು ಖಾಲಿ

*ಇಲ್ಲಿ 15 ಗೋಪುರಗಳಿದ್ದು, ಪ್ರತೀ ಗೋಪುರಕ್ಕೂ ಒಬ್ಬೊಬ್ಬ ‘ಕ್ಯಾಪ್ಟನ್’ ನೇಮಿಸಲಾಗಿತ್ತು. ಎರಡು ಬಾರಿ ಪರಿಶೀಲಿಸಿ, ಕಟ್ಟಡದಲ್ಲಿ ಯಾರೂ ಇಲ್ಲ ಎಂಬುದನ್ನು ಅವರು ಖಚಿತಪಡಿಸಿಕೊಂಡಿದ್ದರು

*ಒಬ್ಬ ಮಲಗಿದ್ದ: ಕಟ್ಟಡದ ಮೇಲಿನ ಅಂತಸ್ತಿನಲ್ಲಿರುವ ಒಬ್ಬ ವ್ಯಕ್ತಿ ಇನ್ನೂ ಅಪಾರ್ಟ್‌ಮೆಂಟ್ ತೆರವು ಮಾಡಿಲ್ಲ ಎಂಬುದಾಗಿ ಬೆಳಿಗ್ಗೆ ಏಳು ಗಂಟೆಗೆ ತಿಳಿಯಿತು. ತಕ್ಷಣವೇ ಜಾಗೃತರಾದ ಭದ್ರತಾ ಸಿಬ್ಬಂದಿ, ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಕಟ್ಟಡದಿಂದ ಕೆಳಗಿಳಿಸಿದರು

*ಸ್ಟಿಕರ್ ವ್ಯವಸ್ಥೆ: ಪ್ರತೀ ಮನೆಯ ಹೊರಗಡೆ ಸ್ಟಿಕರ್ ಅಂಟಿಸುವ ವ್ಯವಸ್ಥೆ ರೂಪಿಸಲಾಗಿತ್ತು. ತೆರವಿಗೂ ಮುನ್ನ ಪೂರೈಸಬೇಕಾದ ಎಲ್ಲ ಕೆಲಸಗಳನ್ನು ಇದರಲ್ಲಿ ನಮೂದಿಸಲಾಗಿತ್ತು

ಅಹಂ ನೆಲಸಮ: ಎಫ್‌ಪಿಸಿಇ
ಅಪಾರ್ಟ್‌ಮೆಂಟ್ ನೆಲಸಮ ಘಟನೆಯು ಫ್ಲಾಟ್ ಮಾಲೀಕರಿಗೆ ಸಿಕ್ಕಿರುವ ದೊಡ್ಡ ಗೆಲುವು ಎಂದು ಮನೆ ಖರೀದಿಸುವವರ ಸಂಘಟನೆ ಅಭಿಪ್ರಾಯಟ್ಟಿದೆ. ಇದರಿಂದ ಬಿಲ್ಡರ್‌ಗಳು ಹಾಗೂ ಪ್ರಾಧಿಕಾರಗಳ ಅಹಂ ಕೂಡಾ ನೆಲಸಮವಾಗಿದೆ ಎಂದು ‘ಫೋರಂ ಫಾರ್ ಪೀಪಲ್ಸ್ ಕಲೆಕ್ಟಿವ್ ಎಫರ್ಸ್‌’ ಅಧ್ಯಕ್ಷ ಅಭಯ್ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ. ರೆರಾ ಕಾಯ್ದೆ ಜಾರಿಯಲ್ಲಿ ಈ ಸಂಘಟನೆ ಮಹತ್ವದ ಪಾತ್ರ ವಹಿಸಿತ್ತು.

₹500 ಕೋಟಿ ನಷ್ಟ
ಅವಳಿ ಗೋಪುರಗಳ ನೆಲಸಮದಿಂದ ₹500 ಕೋಟಿ ನಷ್ಟ ಸಂಭವಿಸಿದೆ ಎಂದು ಸೂಪರ್‌ಟೆಕ್ ಕಂಪನಿ ಮುಖ್ಯಸ್ಥ ಆರ್.ಕೆ. ಆರೋರಾ ತಿಳಿಸಿದ್ದಾರೆ. ಜಾಗ ಖರೀದಿ, ಕಟ್ಟಡ ನಿರ್ಮಾಣ ವೆಚ್ಚ, ಬ್ಯಾಂಕ್‌ಗಳಿಂದ ಪಡೆದ ಸಾಲಕ್ಕೆ ಎರಡು ವರ್ಷದಿಂದ ಪಾವತಿಸುತ್ತಿರುವ ಬಡ್ಡಿ, ಪ್ರಾಧಿಕಾರದಿಂದ ಅನುಮತಿ ಪಡೆಯಲು ಮಾಡಿದ ವೆಚ್ಚ, ಈ ಎರಡೂ ಗೋಪುರಗಳ ನಿವಾಸಿಗಳಿಗೆ ಶೇ 12ರ ಬಡ್ಡಿ ದರದಲ್ಲಿ ಹಿಂದುರಿಗಿಸಬೇಕಾದ ಮೊತ್ತ ಇದರಲ್ಲಿ ಸೇರಿವೆ. ಅವಳಿ ಗೋಪುರ ನಿರ್ಮಾಣ ಯೋಜನೆಗೆ ನೊಯಿಡಾ ಅಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿತ್ತು. ಅದರ ಪ್ರಕಾರವೇ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

₹20 ಕೋಟಿ ವೆಚ್ಚ
8 ಲಕ್ಷ ಚದರ ಅಡಿಯಲ್ಲಿ ನಿರ್ಮಾಣವಾಗಿರುವ ಅವಳಿ ಗೋಪುರಗಳನ್ನು ನೆಲಸಮ ಮಾಡಲು ಸುಮಾರು ₹20 ಕೋಟಿ ವೆಚ್ಚ ತಗುಲಿದೆ. ಕಟ್ಟಡ ನೆಲಸಮದಿಂದ ತೊಂದರೆಯಾದಲ್ಲಿ, ಹಾನಿಯನ್ನು ಭರಿಸಲು ₹100 ಕೋಟಿ ಮೊತ್ತದ ವಿಮೆ ಮಾಡಿಸಲಾಗಿತ್ತು. ಎಡಿಫಿಸ್ ಎಂಜಿನಿಯರಿಂಗ್ ಮತ್ತು ದಕ್ಷಿಣ ಆಫ್ರಿಕಾದ ಜೆಟ್ ಡೆಮಾಲಿಷನ್ಸ್‌ ಕಂಪನಿಗಳಿಗೆ ನೆಲಸಮ ಕೆಲಸ ವಹಿಸಲಾಗಿತ್ತು. ಈ ಕಂಪನಿಗಳಿಗೆ ₹17.5 ಕೋಟಿಯನ್ನು ಪಾವತಿಸಲಾಗಿತ್ತು.

ಗಾಳಿ ಗುಣಮಟ್ಟ ಕುಸಿತ: ಎಚ್ಚರಿಕೆ
ಅಪಾರ್ಟ್‌ಮೆಂಟ್ ನೆಲಸಮದಿಂದ ವಿಪರೀತ ಪ್ರಮಾಣದ ದೂಳು ಎದ್ದಿದ್ದು, ದೆಹಲಿ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ಗಾಳಿಯ ಗುಣಮಟ್ಟ ಅಪಾಯದ ಮಟ್ಟ ತಲುಪಬಹುದು ಎಂದು ಏಮ್ಸ್ ಹೆಚ್ಚುವರಿ ಪ್ರಾಧ್ಯಾಪಕ ಡಾ. ಹರ್ಷಲ್ ಸಾಳ್ವೆ ತಿಳಿಸಿದ್ದಾರೆ. ಮುಂದಿನ 15 ದಿನಗಳವರೆಗೆ ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟದಲ್ಲಿ ಇರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 2.5 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ದೂಳಿನ ಕಣಗಳು ಉತ್ಪತ್ತಿಯಾಗಿವೆ. ಹೊಗೆ ಹಾಗೂ ಮಂಜಿನ ಪ್ರಮಾಣ ಅಳತೆ ಮಾಡುವ ಮಾಪಕಗಳೇ ಈ ಸಮಯದಲ್ಲಿ ನಿಷ್ಕ್ರಿಯವಾಗಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಸಮೀಪದ ನಿವಾಸಿಗಳು ಕೆಲವು ದಿನಗಳ ಕಾಲ ಈ ಸ್ಥಳದಿಂದ ಹೊರಗಿರುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಕಟ್ಟಡ ತ್ಯಾಜ್ಯವನ್ನು ಬೇರೆಡೆಗೆ ಸಾಗಿಸುವಾಗ ದೂಳು ಉಂಟಾಗುತ್ತದೆ. ಇದು ಅನಾರೋಗ್ಯ ಹಾಗೂ ಉಸಿರಾಟದ ಸಮಸ್ಯೆ ತೊಂದೊಡ್ಡಬಹುದು ಎಂದು ಹೇಳಿದ್ದಾರೆ.

200 ಕಿ.ಮೀ. ದೂರದಿಂದ ಬಂದರು!
ಅವಳಿ ಗೋಪುರಗಳ ನೆಲಸಮ ಘಟನೆಗೆ ಪ್ರತ್ಯಕ್ಷದರ್ಶಿಯಾಗಲು ರಿಯಾಜ್ ಹಾಗೂ ಅವರ ಪತ್ನಿ ಎಂಬ ಅಜ್ಜ, ಅಜ್ಜಿ 200 ಕಿ.ಮೀ ದೂರದ ಆಗ್ರಾದಿಂದ ನೊಯಿಡಾಕ್ಕೆ ಬಂದಿದ್ದರು. ತಮ್ಮ ಐದು ವರ್ಷದ ಮೊಮ್ಮಗನ ಅಪೇಕ್ಷೆಯಂತೆ ಈ ಘಟನೆಯನ್ನು ತೋರಿಸುವುದು ಅವರ ಉದ್ದೇಶವಾಗಿತ್ತು. ಉತ್ತರ ಪ್ರದೇಶ ಮೈನ್‌ಪುರಿಯ ಅಕ್ಷಯ್ ಮಿಶ್ರಾ ಎಂಬುವರು ತಮ್ಮ ಮನೆಯಲ್ಲಿ ಹೇಳದೆಯೇ ನೊಯಿಡಾಕ್ಕೆ ಧಾವಿಸಿದ್ದರು. ರಿಯಾಜ್, ಅಕ್ಷಯ್ ಅವರಂತೆ ಹಲವರು ವಿವಿಧ ಭಾಗಗಳಿಂದ ನೊಯಿಡಾಕ್ಕೆ ಭಾನುವಾರ ಬೆಳಿಗ್ಗೆಯೇ ಬಂದಿಳಿದಿದ್ದರು.

ಮೀಮ್‌ ಸದ್ದು
ಅವಳಿ ಗೋಪುರ ನೆಲಸಮ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್‌ಗಳನ್ನು ಸೃಷ್ಟಿಸಿದೆ. ‘ಗೋಪುರ ಮತ್ತು ಭ್ರಷ್ಟಾಚಾರ’ ಎರಡೂ ನೆಲಸಮವಾಗಿವೆ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. ‘ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಈ ಸುದ್ದಿಯನ್ನು ಬಿತ್ತರಿಸುತ್ತಿರುವುದನ್ನು ನೋಡಿದರೆ, ಇಸ್ರೊ ಸಂಸ್ಥೆಯು ಚಂದ್ರನತ್ತ ಗಗನಯಾನವನ್ನೇದರೂ ಕಳಿಸುತ್ತಿದೆಯಾ’ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ಕೊಚ್ಚಿಯಲ್ಲೂ ನೆಲಸಮ ಆಗಿತ್ತು
ಪರಿಸರ ನಿಮಯಗಳನ್ನು ಮೀರಿದ ಆರೋಪದ ಮೇಲೆ ಕೇರಳದ ಕೊಚ್ಚಿಯಲ್ಲಿ ಎರಡು ವರ್ಷಗಳ ಹಿಂದೆ ಕಟ್ಟಡವೊಂದನ್ನು ಇದೇ ರೀತಿ ನೆಲಸಮ ಮಾಡಲಾಗಿತ್ತು. 19 ಅಂತಸ್ತಿನ ಎಚ್‌2ಒ ಹೋಲಿ ಫೇತ್ ಅಪಾರ್ಟ್‌ಮೆಂಟ್‌ ಅನ್ನು ಕೆಲವೇ ಸೆಕೆಂಡ್‌ಗಳಲ್ಲಿ ಉರುಳಿಸಲಾಗಿತ್ತು. ಇದು ಭಾರತದ ಅತಿದೊಡ್ಡ ಹಾಗೂ ವ್ಯವಸ್ಥಿತ ಕಟ್ಟಡ ನೆಲಸಮ ಕಾರ್ಯಕ್ರಮ ಎಂದು ಹೇಳಲಾಗಿತ್ತು. ಈ ದೃಶ್ಯವನ್ನು ನೋಡಲು ಸಾವಿರಾರು ಜನರು ಅಂದು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT