ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಪರಿಹಾರ: ಕೇಂದ್ರದ ಸಲಹೆ ಬಿಜೆಪಿಯೇತರ ರಾಜ್ಯಗಳಿಗೆ ಅಪಥ್ಯ

Last Updated 30 ಆಗಸ್ಟ್ 2020, 19:38 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ವರಮಾನ ಕೊರತೆಯನ್ನು ತುಂಬಿಕೊಳ್ಳಲು ಸಾಲ ಪಡೆಯಿರಿ ಎಂದು ಕೇಂದ್ರವು ನೀಡಿದ ಆಯ್ಕೆಯು ಬಿಜೆ‍ಪಿಯೇತರ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಿಗೆ ಪಥ್ಯವಾಗಿಲ್ಲ. ಪಶ್ಚಿಮ ಬಂಗಾಳ ಮತ್ತು ಕೇರಳ ಈ ಆಯ್ಕೆಯನ್ನು ನೇರವಾಗಿಯೇ ತಿರಸ್ಕರಿಸಿವೆ.

‘ಇದು ಸ್ವೀಕಾರಾರ್ಹ ಅಲ್ಲವೇ ಅಲ್ಲ’ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್‌ ಮಿತ್ರಾ ಭಾನುವಾರ ಹೇಳಿದ್ದಾರೆ. ಜಿಎಸ್‌ಟಿ ಕೊರತೆಯ ಪರಿಹಾರವಾಗಿ ಸಾಲ ಪಡೆಯಲು ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದೆ ಭಾನುವಾರ ಇರಿಸಲಾಗಿತ್ತು.

ಕೇರಳ ಸರ್ಕಾರವೂ ಕೇಂದ್ರದ ಪ್ರಸ್ತಾವವನ್ನು ತಿರಸ್ಕರಿಸಿದೆ. ಅದನ್ನು ಲಿಖಿತವಾಗಿ ಕೇಂದ್ರಕ್ಕೆ ತಿಳಿಸಲು ನಿರ್ಧರಿಸಿದೆ. ಛತ್ತೀಸಗಡ ಸರ್ಕಾರವು ಈ ವಿಚಾರದಲ್ಲಿ ಸೋಮವಾರ ನಿರ್ಧಾರ ತೆಗೆದುಕೊಳ್ಳಲಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಕೂಡ ಈ ವಾರದಲ್ಲಿ ನಿಲುವು ಪ್ರಕಟಿಸಲಿವೆ. ಆಂಧ್ರ ಪ್ರದೇಶ, ತೆಲಂಗಾಣ, ದೆಹಲಿ ಮತ್ತು ಜಾರ್ಖಂಡ್‌, ಬಿಜೆಪಿಯೇತರ ಪಕ್ಷಗಳ ಸರ್ಕಾರಗಳ ನಿರ್ಧಾರವನ್ನು ಬೆಂಬಲಿಸುವ ಸಾಧ್ಯತೆ ಇದೆ.

2017ರ ಜಿಎಸ್‌ಟಿ ಕಾನೂನು ಮೂಲಕ ಜಿಎಸ್‌ಟಿ ಕೊರತೆಯನ್ನು ತುಂಬಿ ಕೊಡುವ ಭರವಸೆಯನ್ನು ನೀಡಲಾಗಿದೆ. ಸಾಲ ಪಡೆಯಲು ಅಥವಾ ಸಾಲದ ಮರುಪಾವತಿಗೆ ತಮಗೆ ಹೆಚ್ಚಿನ ಅವಕಾಶಗಳು ಇಲ್ಲ. ಬದಲಿಗೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವ ಅವಕಾಶ ಕೇಂದ್ರಕ್ಕೆ ಹೆಚ್ಚು ಎಂಬುದು ಈ ರಾಜ್ಯಗಳ ವಾದವಾಗಿದೆ.

ಬಿಜೆಪಿ ಆಡಳಿತ ಇರುವ ಕೆಲವು ರಾಜ್ಯಗಳೂ ಸೇರಿ 15 ದೊಡ್ಡ ರಾಜ್ಯಗಳು ಕೇಂದ್ರದ ಸಲಹೆಗೆ ವಿರೋಧ ವ್ಯಕ್ತಪಡಿಸಿವೆ. ಕೇಂದ್ರವೇ ಸಾಲ ಪಡೆಯಬೇಕು ಎಂಬುದು ಈ ರಾಜ್ಯಗಳ ವಾದ ಎಂದು ಅಮಿತ್‌ ಮಿತ್ರಾ ಹೇಳಿದ್ದಾರೆ.

ಈ ಆರ್ಥಿಕ ವರ್ಷದಲ್ಲಿ ಕೇಂದ್ರವು ಪಾವತಿಸಬೇಕಾದ ಜಿಎಸ್‌ಟಿ ಪರಿಹಾರದ ಮೊತ್ತವು ₹3 ಲಕ್ಷ ಕೋಟಿ. ಇದರಲ್ಲಿ ಸೆಸ್‌ ಮೂಲಕ ₹65 ಸಾವಿರ ಕೋಟಿ ಸಂಗ್ರಹ ಆಗಬಹುದು. ಹಾಗಾಗಿ, ₹2.35 ಲಕ್ಷ ಕೋಟಿ ಕೊರತೆ ಆಗಲಿದೆ. ಜಿಎಸ್‌ಟಿ ಜಾರಿಯಿಂದಾಗಿ ಆಗಿರುವ ಕೊರತೆಯು ₹97 ಸಾವಿರ ಕೋಟಿ ಮಾತ್ರ. ಉಳಿದ ಮೊತ್ತದ ಕೊರತೆಗೆ ಕಾರಣ ಕೋವಿಡ್‌ನ ಪರಿಣಾಮ ಎಂದು ಕೇಂದ್ರವು ಅಂದಾಜಿಸಿದೆ.

ಜಿಎಸ್‌ಟಿ ಜಾರಿಯಿಂದ ವರಮಾನ ಕೊರತೆ ಆದರೆ ಅದನ್ನು ಕೇಂದ್ರವು ತುಂಬಿಕೊಡಬೇಕು ಎಂದು ಜಿಎಸ್‌ಟಿ ಕಾನೂನು ಹೇಳುತ್ತದೆ. ಆದರೆ, ಕೇಂದ್ರವು ತುಂಬಿ ಕೊಡದಿದ್ದರೆ ಏನು ಮಾಡಬೇಕು ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT