ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಸರಿ ಪಡೆಯ ಶಕ್ತಿ ಕೇಂದ್ರ ‘ಉತ್ತರ ಬಂಗಾಳ‘ದ ಬಿಜೆಪಿ ನಾಯಕ ಟಿಎಂಸಿ ಸೇರ್ಪಡೆ

ಅಲಿಪುರದೂರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಂಗಾ ಪ್ರಸಾದ್ ಶರ್ಮಾ ಅವರು ಬಿಜೆಪಿ ತೊರೆದು ಟಿಎಂಸಿ ಸೇರಿದ್ದಾರೆ
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ. ಉತ್ತರ ಬಂಗಾಳದಲ್ಲಿ ಪಕ್ಷದ ಸಂಘಟನಾ ಚತುರ ಎನಿಸಿಕೊಂಡಿದ್ದ ಅಲಿಪುರದೂರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಂಗಾ ಪ್ರಸಾದ್ ಶರ್ಮಾ ಅವರು ಬಿಜೆಪಿ ತೊರೆದು ಟಿಎಂಸಿ ಸೇರಿದ್ದಾರೆ.

ಸೋಮವಾರ ಕೋಲ್ಕತ್ತದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಟಿಎಂಸಿ ನಾಯಕ ಮುಕುಲ್ ರಾಯ್, ಶಿಕ್ಷಣ ಸಚಿವ ಬೃತ್ಯಾ ಬಸು ಹಾಗೂ ಟಿಎಂಸಿ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್ ಅವರು ಶರ್ಮಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿರುವ ಶರ್ಮಾ ಅವರು, ‘ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಬೆಳವಣಿಗೆಗಳು ನನಗೆ ದುಃಖ ತರಿಸಿವೆ.ಅಲಿಪುರದೂರ್ ಜಿಲ್ಲೆಯ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟರೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ನಮ್ಮನ್ನು ಸಂಪರ್ಕಿಸಲಿಲ್ಲ. ಚುನಾವಣೆಗೂ ಮುಂಚೆ ನಾನು ಬಿಜೆಪಿ ತೊರೆದಿದ್ದರೆ ಅವರು ನನ್ನನ್ನು ದೇಶದ್ರೋಹಿ ಎನ್ನುತ್ತಿದ್ದರು‘ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸುವೇಂಧು ಅಧಿಕಾರಿ, ‘ಗಂಗಾ ಪ್ರಸಾದ್ ಶರ್ಮಾ ಅವರ ನಿರ್ಗಮನ ಪಕ್ಷದ ಸಂಘಟನೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷವಲ್ಲ’ಎಂದು ಹೇಳಿದ್ದಾರೆ.

ಉತ್ತರ ಬಂಗಾಳಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿತ್ತು 54 ವಿಧಾನಸಭಾ ಕ್ಷೇತ್ರಗಳ ಪೈಕಿ 30 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಇದೀಗ ಈ ಕ್ಷೇತ್ರದ ಬಿಜೆಪಿ ನಾಯಕರು ಟಿಎಂಸಿಯತ್ತ ಮುಖ ಮಾಡುತ್ತಿರುವುದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಇನ್ನೊಂದೆಡೆ ಉತ್ತರ ಬಂಗಾಳವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎನ್ನುವ ಕೂಗನ್ನು ಈ ಭಾಗದ ಬಿಜೆಪಿ ನಾಯಕರು ಆರಂಭಿಸಿದ್ದು, ಇದನ್ನು ವಿರೊಧಿಸಿ ಟಿಎಂಸಿ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT