ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಲು ವಕೀಲರ ಕೊರತೆ: ಸುಪ್ರೀಂ ಕೋರ್ಟ್

Last Updated 18 ನವೆಂಬರ್ 2022, 5:25 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಪರ್ಯಾಯ ವ್ಯವಸ್ಥೆ ಮೂಲಕ (ಲ್ಯಾಟರಲ್‌ ಎಂಟ್ರಿ) ನೇಮಕಾತಿ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಹ ವಕೀಲರು ಲಭ್ಯರಾಗದೆ ಇರುವುದಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ಕನಿಷ್ಠ ಏಳು ವರ್ಷಗಳ ಅನುಭವ ಹೊಂದಿರುವ ವಕೀಲರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಉನ್ನತ ನ್ಯಾಯಾಂಗ ಸೇವೆಗಳಿಗೆ ಲ್ಯಾಟರಲ್‌ಗೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹುದು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಉನ್ನತ ನ್ಯಾಯಾಂಗ ಸೇವೆಗಳ (ಎಚ್‌ಜೆಎಸ್) ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳ ಅರ್ಜಿಯ ವಿಚಾರಣೆ ನಡೆಸಿತು.

ಅರ್ಜಿ ಪುರಸ್ಕರಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಜೆ. ಬಿ. ಪಾರ್ದಿವಾಲಾ ಪೀಠ,‘ರಾಜಸ್ಥಾನ ಹೈಕೋರ್ಟ್‌ಗೆ ತೆರಳಲು ಅರ್ಜಿದಾರರಿಗೆ ಮುಕ್ತ ಅವಕಾಶ ನೀಡುತ್ತೇವೆ. ಅಂತಹ ಅರ್ಜಿ ಸಲ್ಲಿಸಿದರೆ ಪೀಠ ರಚಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಕೋರುತ್ತೇವೆ’ ಎಂದು ಹೇಳಿದೆ.

‘ದೇಶದಾದ್ಯಂತ ಉನ್ನತ ನ್ಯಾಯಾಂಗ ಸೇವೆಗಳಿಗೆ ಲ್ಯಾಟರಲ್ ಪ್ರವೇಶಕ್ಕಾಗಿ ಅಭ್ಯರ್ಥಿಗಳು (ವಕೀಲರು) ಲಭ್ಯರಾಗುತ್ತಿಲ್ಲ. ಮಹಾರಾಷ್ಟ್ರ ಮತ್ತು ಅಲಹಾಬಾದ್ ಹೈಕೋರ್ಟ್‌ನಲ್ಲಿನ ನನ್ನ ಅನುಭವದ ಪ್ರಕಾರ ನಮಗೆ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಹೇಳಬಲ್ಲೆ. ವಕೀಲರು ಉನ್ನತ ನ್ಯಾಯಾಂಗ ಸೇವೆಗಳಿಗೆ ಸೇರಬೇಕೆಂದು ನಾವು ಬಯಸುತ್ತೇವೆ’ ಎಂದು ಸಿಜೆಐ ಹೇಳಿದರು.

ಅ. 21 ರಂದು ಘೋಷಿಸಲಾದ ಅಂತಿಮ ಫಲಿತಾಂಶವನ್ನು ರದ್ದುಗೊಳಿಸಬೇಕು ಮತ್ತು ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶರಿಂದ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಮಾಡಬೇಕು ಎಂದು ಎಚ್‌ಜೆಎಸ್‌ ಪರೀಕ್ಷೆಗೆ ಹಾಜರಾದ ವಕೀಲರು ಕೋರಿದರು.

ರಾಜ್ಯದಲ್ಲಿ 85 ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನೇಮಕಕ್ಕಾಗಿ ರಾಜಸ್ಥಾನ ಎಸ್‌ಜೆಎಸ್‌ ಪರೀಕ್ಷೆ ನಡೆಸಿತು. 3,000 ಕ್ಕೂ ಹೆಚ್ಚು ವಕೀಲರು ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 779 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡರು ಎಂದು ವಕೀಲ ಪ್ರಶಾಂತ್ ಭೂಷಣ್ ಹೇಳಿದರು.

ಅಂತಿಮ ಸುತ್ತಿನಲ್ಲಿ ಕೇವಲ ನಾಲ್ಕು ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗಿದೆ. ಇದು ಗಂಭೀರ ವಿಷಯವಾಗಿದ್ದು, ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಲು ಮಾಜಿ ನ್ಯಾಯಮೂರ್ತಿಗಳನ್ನು ನೇಮಿಸುವ ಬಗ್ಗೆ ಸುಪ್ರೀಂ ಕೋರ್ಟ್ ಪರಿಶೀಲಿಸಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT