ಮನೆ ಮುಂದೆ ಪೋಸ್ಟರ್ ಅಂಟಿಸಲು ನಾವು ಸೂಚಿಸಿಲ್ಲ: ಸುಪ್ರೀಂಗೆ ಕೇಂದ್ರದ ಮಾಹಿತಿ

ನವದೆಹಲಿ: ‘ಕೋವಿಡ್–19 ದೃಢಪಟ್ಟವರ ಮನೆಯ ಮುಂದೆ ‘ಕೋವಿಡ್–19 ಪಾಸಿಟಿವ್’ ಎಂಬ ಪೋಸ್ಟರ್ ಅಂಟಿಸಲು ರಾಜ್ಯಗಳಿಗೆ ನಾವು ಸೂಚಿಸಿಲ್ಲ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮಂಗಳವಾರ ತಿಳಿಸಿದೆ.
ಈ ಪದ್ಧತಿಯನ್ನು ನಿಲ್ಲಿಸಲು ಆಯಾ ರಾಜ್ಯ ಸರ್ಕಾರಗಳೇ ಸೂಕ್ತ ಆದೇಶಗಳನ್ನು ಹೊರಡಿಸಬಹುದು ಎಂದೂ ಕೇಂದ್ರವು ತಿಳಿಸಿದೆ.
ಈ ರೀತಿ ಪೋಸ್ಟರ್ ಅಂಟಿಸಲು ರಾಜ್ಯ ಸರ್ಕಾರಗಳು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಲು ಕೋರಿ ವಕೀಲರಾದ ಖುಷ್ ಕಲ್ರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಗೆತ್ತಿಕೊಂಡಿತು. ‘ಇಂಥ ಪೋಸ್ಟರ್ಗಳಿಂದಾಗಿ ಕೋವಿಡ್–19 ದೃಢಪಟ್ಟವರನ್ನು ಅಸ್ಪೃಶ್ಯರಂತೆ ಕಾಣುವ ಸಾಧ್ಯತೆ ಇದೆ’ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಹಾಗೂ ಎಂ.ಆರ್.ಶಾ ಅವರಿದ್ದ ಪೀಠವು ಹೇಳಿತು.
‘ಇತರರನ್ನು ಎಚ್ಚರಿಸಲು ಇಂಥ ಪೋಸ್ಟರ್ಗಳು ಹಾಕಿರಬಹುದೇ ಹೊರತು ಅವರಿಗೆ ಕಳಂಕ ತರಲು ಅಲ್ಲ. ಕೋವಿಡ್–19 ರೋಗಿಗಳು ಇರುವ ಮನೆಗೆ ಪ್ರಮಾದವಶಾತ್ ಯಾರೂ ಪ್ರವೇಶಿಸಬಾರದು ಎನ್ನುವ ಕಾರಣ ಇದರ ಹಿಂದಿರಬಹುದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೇಳಿದರು. ಕೋವಿಡ್–19 ರೋಗಿಗಳ ಮನೆ ಮುಂದೆ ಇಂಥ ಪೋಸ್ಟರ್ಗಳನ್ನು ಅಂಟಿಸುವುದರ ಪರವಾಗಿ ಕೇಂದ್ರ ಸರ್ಕಾರವು ಇಲ್ಲ ಎಂದು ಇದೇ ವೇಳೆ ಕೇಂದ್ರವು ಸ್ಪಷ್ಟನೆ ನೀಡಿತು.
ಕೋವಿಡ್ ದೃಢಪಟ್ಟವರ ಹೆಸರನ್ನು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವಾಟ್ಟ್ಆ್ಯಪ್ ಗ್ರೂಪ್ಗಳಲ್ಲೂ ಹಾಕದಂತೆ ನಿರ್ದೇಶಿಸಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಪೀಠವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.