ಶುಕ್ರವಾರ, ಏಪ್ರಿಲ್ 23, 2021
28 °C

ಪತ್ನಿ ಟೀ ಮಾಡಲು ನಿರಾಕರಣೆ ಹಲ್ಲೆಗೆ ಪ್ರಚೋದನೆ ಎನ್ನಲಾಗದು: ಬಾಂಬೆ ಹೈಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪತ್ನಿ ಟೀ ಮಾಡಲು ನಿರಾಕರಿಸಿದ್ದು ಹಲ್ಲೆ ಮಾಡಲು ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ, ಪತ್ನಿ ಯಾವುದೇ ವಸ್ತುವಲ್ಲ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಟೀ ಮಾಡಲಿಲ್ಲವೆಂದು ಪತ್ನಿ‌ ಮೇಲೆ ಹಲ್ಲೆ ಮಾಡಿದ್ದ 35 ವರ್ಷದ ವ್ಯಕ್ತಿಗೆ ಕೆಳ ನ್ಯಾಯಾಲಯ ವಿಧಿಸಿದ್ದ 10 ವರ್ಷ ಜೈಲು ಶಿಕ್ಷೆಯನ್ನು ಎತ್ತಿಹಿಡಿದಿದೆ.

ಈ ತಿಂಗಳ ಆರಂಭದಲ್ಲಿ ಈ ಬಗ್ಗೆ ಆದೇಶ ನೀಡಿರುವ ನ್ಯಾಯಮೂರ್ತಿ ರೇವತಿ ಮೊಹಿತೆ, ಮದುವೆ ಎಂಬುದು ಸಮನತೆಯೆ ಆಧಾರದ ಮೇಲೆ ನಿಂತಿರುವ ಒಪ್ಪಂದವಾಗಿದೆ ಎಂದು ಹೇಳಿದೆ.

ಆದರೆ, ಪಿತೃಪ್ರಾಧಾನ್ಯತೆ ಮತ್ತು ಮಹಿಳೆ ಪುರುಷನ ಆಸ್ತಿಯೆಂಬ ಕಲ್ಪನೆಯು ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿದೆ, ಇದು ಒಬ್ಬ ಪುರುಷನು ಹೆಂಡತಿ ತನ್ನ "ವಸ್ತು" ಎಂದು ಯೋಚಿಸಲು ಕಾರಣವಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ದಂಪತಿಯ 6 ವರ್ಷದ ಮಗಳ ಸಾಕ್ಷ್ಯದ ಮೇಲೆ ಆತ್ಮವಿಶ್ವಾಸ ಮೂಡುತ್ತದೆ. ಆ ಬಗ್ಗೆ ಅಪನಂಬಿಕೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

2016 ರಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಸೋಲಾಪುರ ಜಿಲ್ಲೆಯ ಪಂಢರಾಪುರದ ನಿವಾಸಿ ಸಂತೋಷ್ ಅಟ್ಕರ್ (35) ಗೆ ಸ್ಥಳೀಯ ನ್ಯಾಯಾಲಯವು ನೀಡಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ನ್ಯಾಯಾಲಯದ ಆದೇಶದ ಪ್ರಕಾರ, 2013ರ ಡಿಸೆಂಬರ್‌ನಲ್ಲಿ ಘಟನೆ ನಡೆಯುವುದಕ್ಕೂ ಮುನ್ನ ಕೆಲ ಸಮಯದಿಂದ ಅಟ್ಕರ್ ಮತ್ತು ಆತನ ಪತ್ನಿ ನಡುವೆ ಸಂಬಂಧ ಹದಗೆಟ್ಟಿತ್ತು. ಆ ದಿನ ಪತ್ನಿ ಒಂದು ಕಪ್ ಚಹಾ ಮಾಡಿಕೊಡದೆ ಹೊರಗೆ ತೆರಳಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ಅಟ್ಕರ್ ಸುತ್ತಿಗೆಯಿಂದ ಬಲವಾಗಿ ಹೊಡೆದು ಗಂಭೀರ ಗಾಯಗೊಳಿಸಿದ್ದ.

ಪ್ರಕರಣದ ವಿವರಗಳು ಮತ್ತು ದಂಪತಿಗಳ ಮಗಳ ಸಾಕ್ಷ್ಯದ ಪ್ರಕಾರ, ಅಟ್ಕರ್ ಹಲ್ಲೆ ಬಳಿಕ ಅಪರಾಧದ ಸ್ಥಳವನ್ನು ಸ್ವಚ್ಛಗೊಳಿಸಿ, ಹೆಂಡತಿಗೆ ಸ್ನಾನ ಮಾಡಿಸಿ ಆಸ್ಪತ್ರೆಗೆ ಕರೆದೊಯ್ದಿದ್ದ.ಬಳಿಕ ಒಂದು ವಾರದ ಕಾಲ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಪತ್ನಿ ಚಹಾ ಮಾಡಲು ನಿರಾಕರಿಸಿದ್ದರಿಂದ ಅಟ್ಕರ್ ಅಪರಾಧ ಎಸಗಿದ್ದಾನೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದರು.

ಆದರೆ, ಆರೋಪಿ ಪರ ವಕೀಲರ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದು, ಆತನ ಮಗಳ ಸಾಕ್ಷ್ಯವನ್ನು ಒಳಗೊಂಡಂತೆ ಅಪರಾಧ ಸಾಬೀತಿಗೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದೆ.

"ಪತ್ನಿಯು ಚಹಾ ಮಾಡಲು ನಿರಾಕರಿಸುವುದರ ಮೂಲಕ ಗಂಭೀರ ಹಲ್ಲೆ ಮಾಡಲು ಹಠಾತ್ ಪ್ರಚೋದನೆಯನ್ನು ನೀಡಿದ್ದಾಳೆ ಎಂದು ಹೇಳಲಾಗುವುದಿಲ್ಲ. ಪತ್ನಿ ಯಾವುದೇ ವಸ್ತುವಲ್ಲ ಎಂದು ನ್ಯಾಯಾಲಯ ಹೇಳಿದೆ.

ಇಂತಹ ಪ್ರಕರಣಗಳು ಸಮಾಜದಲ್ಲಿರುವ ಲಿಂಗ ಅಸಮಾನತೆ ಮತ್ತು ತಿರುಚಿದ ಪಿತೃ ಪ್ರಾಧಾನ್ಯತೆಯನ್ನು ಪ್ರತಿಬಿಂಬಿಸುತ್ತವೆ, ಇಂತಹ ಸಾಮಾಜಿಕ-ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದವರು ದೊಡ್ಡವರಾದ ಬಳಿಕ ಅದನ್ನೇ ಪಾಲಿಸುತ್ತಾರೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು