ಮಂಗಳವಾರ, ಜನವರಿ 26, 2021
28 °C
ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಹೇಳಿಕೆ

‘ಸಾಮಾನ್ಯ ರೈಲು ಸೇವೆ ಪುನರಾರಂಭ: ನಿರ್ದಿಷ್ಟ ದಿನಾಂಕ ಹೇಳಲು ಅಸಾಧ್ಯ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸಾಮಾನ್ಯ ರೈಲು ಸೇವೆಯನ್ನು ಯಾವ ನಿರ್ದಿಷ್ಟ ದಿನಾಂಕದಿಂದ ಪುನರಾರಂಭಿಸಲಾಗುವುದು ಎಂದು ಹೇಳುವುದು ಅಸಾಧ್ಯ’ ಎಂದು ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಶುಕ್ರವಾರ ಹೇಳಿದ್ದಾರೆ.

‘ಕೋವಿಡ್‌–19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರಿಂದ ಗಳಿಸುತ್ತಿದ್ದ ಆದಾಯದಲ್ಲಿ ಭಾರಿ ನಷ್ಟವುಂಟಾಗಿದೆ. ಸಾಮಾನ್ಯ ರೈಲುಗಳ ಸೇವೆಯನ್ನು ನಿರ್ದಿಷ್ಟ ದಿನಾಂಕದಂದೇ ಪುನರಾರಂಭಿಸುವ ಕುರಿತು ಹೇಳುವುದು ಅಸಾಧ್ಯ. ರಾಜ್ಯ ಸರ್ಕಾರಗಳೊಂದಿಗೆ ನಮ್ಮ ವ್ಯವಸ್ಥಾಪಕರು ಚರ್ಚೆ ನಡೆಸುತ್ತಿದ್ದಾರೆ. ಈಗಲೂ ನಾವು ಸಾಮಾನ್ಯ ಸ್ಥಿತಿಗೆ ಮೊದಲಿನಂತೆ ಮರಳಲು ಸಾಧ್ಯವಾಗಿಲ್ಲ. ಹಾಗಾಗಿ, ನಾವು ಯಾವಾಗ ಸಾಮಾನ್ಯ ರೈಲ್ವೆ ಸೇವೆಯನ್ನು ಎಂದಿನಿಂದ ಪುನರಾರಂಭಿಸುತ್ತೇವೆ ಎಂದು ಹೇಳುವುದು ಅಸಾಧ್ಯ’ ಎಂದು ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಪ್ರಸ್ತುತ ಶೇ 30ರಿಂದ 40ರಷ್ಟು ಮಾತ್ರ ರೈಲುಗಳು ಸೇವಾ ನಿರತವಾಗಿವೆ. ಇನ್ನೂ ಪೂರ್ಣಪ್ರಮಾಣದಲ್ಲಿ ಸಂಚಾರ ಆರಂಭವಾಗಿಲ್ಲ. ಇದು ಸಾಂಕ್ರಾಮಿಕ ರೋಗದ ಕುರಿತು ಇನ್ನೂ ಇರುವ ಭಯವನ್ನು ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಹಂತಹಂತವಾಗಿ ಸಾಮಾನ್ಯ ರೈಲು ಸೇವೆಯನ್ನು ಪುನರಾರಂಭಿಸಲಾಗುವುದು’ ಎಂದು ಅವರು ಹೇಳಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತೀಯ ರೈಲ್ವೆ ಮಂಡಳಿಯ ಆದಾಯದಲ್ಲಿ ಶೇ 87ರಷ್ಟು ಕುಸಿತ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಪ್ರಯಾಣಿಕರಿಂದ ₹ 4,600 ಕೋಟಿ ಆದಾಯ ಗಳಿಸಲಾಗಿದೆ. ಮಾರ್ಚ್ 2021ರ ವೇಳೆಗೆ ಈ ಆದಾಯ ₹ 15 ಸಾವಿರ ಕೋಟಿಗೆ ತಲುಪುವ ನಿರೀಕ್ಷೆ ಇದೆ. ಪ್ರಯಾಣಿಕರ ವಿಭಾಗದಿಂದ ಆಗಿರುವ ನಷ್ಟವನ್ನು ಸರಕು ಸಾಗಣೆಯ ರೈಲಗಳ ಮೂಲಕ ನಿವಾರಣೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಗಳಿಸಿದ್ದಕ್ಕಿಂತ ಹೆಚ್ಚಿನ ಆದಾಯ ದೊರೆಯುವ ನಿರೀಕ್ಷೆ ಇದೆ. ಡಿಸೆಂಬರ್ ವೇಳೆಗಾಗಲೇ ಶೇ 97ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು