ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸ್ವಭಾವತಃ ಬಲಪಂಥೀಯ ಮನೋಭಾವದವನಲ್ಲ: ವರುಣ್‌ ಗಾಂಧಿ

Last Updated 26 ಆಗಸ್ಟ್ 2020, 20:15 IST
ಅಕ್ಷರ ಗಾತ್ರ

‘ನಾನು ಸ್ವಭಾವತಃ ಬಲಪಂಥೀಯ ಮನೋಭಾವದವನಲ್ಲ.ನನ್ನ ಬರಹ ಗಳು ಸ್ಥಿರವಾದ ಪ್ರಗತಿಪರ ಉದಾರ ಚಿಂತನೆಗೆ ಸಾಕ್ಷಿಯಾಗಿವೆ. ನಾನು ಎಡಪಂಥೀಯ ಒಲವುಳ್ಳ ಮಧ್ಯಮ ಮಾರ್ಗದ ಚಿಂತನೆಯ ವ್ಯಕ್ತಿ’ – ಹೀಗೆಂದು ಬಿಜೆಪಿ ಸಂಸದ ವರುಣ್ ಗಾಂಧಿ ತಮ್ಮನ್ನು ಬಣ್ಣಿಸಿಕೊಂಡಿದ್ದಾರೆ. ಅವರು ಹೊಸ ಪುಸ್ತಕವೊಂದರಲ್ಲಿ ಈ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ‘ಇಂಡಿಯಾ ಟುಮಾರೊ: ಕನ್‌ವರ್‌ಸೇಷನ್ ವಿದ್‌ ದಿ ನೆಕ್ಸ್ಟ್ ಜನರೇಷನ್ ಆಫ್ ಪೊಲಿಟಿಕಲ್ ಲೀಡರ್ಸ್’ ಕೃತಿಯಲ್ಲಿ ತಮಗೆ ಸ್ಫೂರ್ತಿ ನೀಡಿದವರ ಬಗ್ಗೆಯೂ ಉಲ್ಲೇಖಿಸಿದ್ದಾರೆ. ‘ಎಡ ಆರ್ಥಿಕ ಚಿಂತನೆ ಮತ್ತು ಸಾಮಾಜಿಕ ನೀತಿ ಪ್ರತಿಪಾದಿಸುವ ಬ್ರಿಟನ್‌ನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್‌ ಹಾಗೂ ಅಮೆರಿಕ ಡೆಮಾಕ್ರಟಿಕ್ ಸಂಸದ ಬರ್ನಿ ಸ್ಯಾಂಡರ್ ಅವರೇ ನನ್ನ ರಾಜಕೀಯ ಸ್ಫೂರ್ತಿ’ ಎಂದು ನುಡಿದಿದ್ದಾರೆ.

ದೇಶದ ಅತ್ಯಂತ ಭರವಸೆಯ 20 ಯುವ ಮುಖಂಡರ ಸಂದರ್ಶನದ ಮೂಲಕ ಸಮಕಾಲೀನ ಭಾರತದ ರಾಜಕಾರಣದ ದಿಕ್ಕನ್ನು ಓದುಗರಿಗೆ ತಿಳಿಸುವ ಪ್ರಯತ್ನವನ್ನು ಪುಸ್ತಕವು ಮಾಡಿದೆ.

‘ನೀತಿಗಳು ಮತ್ತು ಸಿದ್ಧಾಂತದ ದೃಷ್ಟಿಕೋನದಲ್ಲಿ, ನಾನೊಬ್ಬ ಮಧ್ಯಮ ಮಾರ್ಗದ ಎಡಪಂಥೀಯ ಒಲವಿನ ವಿಚಾರಧಾರೆಗಳನ್ನು ಒಳಗೊಂಡ ವ್ಯಕ್ತಿ ಎಂದು ಹೇಳಲು ಬಯಸುತ್ತೇನೆ. ನನ್ನೊಳಗಿರುವ ಧ್ವನಿಯಂತೆಯೇ ನಾನು ಬದುಕಿದ್ದೇನೆ’ ಎಂದು ವರುಣ್ ಹೇಳಿದ್ದಾರೆ.

ನೆಹರೂ ಕುಟುಂಬದ ಸಂಜಯ್ ಗಾಂಧಿ ಹಾಗೂ ಬಿಜೆಪಿ ನಾಯಕಿ ಮೇನಕಾ ಗಾಂಧಿ ಪುತ್ರ ವರುಣ್ ಗಾಂಧಿ, 2004ರಲ್ಲಿ ಬಿಜೆಪಿ ಸೇರಿದ್ದರು. 2009ರಲ್ಲಿ ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ಮೊದಲ ಯತ್ನದಲ್ಲೇ ಗೆದ್ದುಬಂದರು. ಈಗ ಅದೇ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.

ಆರ್ಥಿಕ ಅಸಮಾನತೆ, ಪರಿಸರ, ಪರಿತ್ಯಕ್ತ ಸಮುದಾಯಗಳಿಗೆ ಸಂಬಂಧಿಸಿ ತಮ್ಮ ನಿಲುವನ್ನು ವಿವರಿಸುವ ಮೂಲಕ ತಾವೊಬ್ಬ ಪ್ರಗತಿಪರ ಉದಾರವಾದಿ ಎಂದು ಬಿಂಬಿಸಲು ಅವರು ಸಂದರ್ಶನದಲ್ಲಿ ಯತ್ನಿಸಿದ್ದಾರೆ.

‘ಪ್ರಗತಿಪರ ಬದಲಾವಣೆಗೆ ಪೂರಕವಾದ ನಿಲುವುಗಳನ್ನು ನಾನು ಸದಾ ಬೆಂಬಲಿಸಿದ್ದೇನೆ. ನಾನು ವಿವಿಧ ರೀತಿಯ ಜನರಿಂದ ಬೆಂಬಲ ಮತ್ತು ಪ್ರೀತಿ ಪಡೆದಿದ್ದೇನೆ. ಬಲಪಂಥೀಯರಿಗಿಂತ ಹತ್ತು ಪಟ್ಟು ಹೆಚ್ಚು ಬೆಂಬಲವನ್ನು ಉದಾರವಾದಿಗಳಿಂದ ಪಡೆದಿದ್ದೇನೆ’ ಎಂದು ಅವರು ಹೇಳಿದ್ದಾರೆ. ‘ಉದಾರವಾದಿ ಎನ್ನುವ ನೀವು ಬಿಜೆಪಿಗೆ ಏಕೆ ಅಂಟಿಕೊಂಡಿದ್ದೀರಿ, ಏಕೆ ಪಕ್ಷದಿಂದ ಹೊರ ನಡೆದಿಲ್ಲ’ ಎಂಬ ಪ್ರಶ್ನೆಗೆ, ‘ನಾನು 15 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ’ ಎಂದಷ್ಟೇ ಉತ್ತರಿಸಿದ್ದಾರೆ.

ತಮ್ಮನ್ನು ‘ಫೈರ್‌ಬ್ರ್ಯಾಂಡ್’ ಎಂದು ಕರೆಯುವುದನ್ನು ಅವರು ಒಪ್ಪುವುದಿಲ್ಲ. 2009ರಲ್ಲಿ ದ್ವೇಷ ಭಾಷಣ ಪ್ರಕರಣದ ಬಳಿಕ ಅನೇಕ ಜನರಲ್ಲಿ ಈ ಅಭಿಪ್ರಾಯ ಇತ್ತು. 2009ರ ಲೋಸಕಭಾ ಚುನಾವಣಾ ಪ್ರಚಾರದ ವೇಳೆ ಪಿಲಿಭಿತ್‌ನಲ್ಲಿ ಅವರು ಮಾಡಿದ ಭಾಷಣ ವಿವಾದ ಸೃಷ್ಟಿಸಿತ್ತು. ಅವರ ಭಾಷಣವುದ್ವೇಷವನ್ನು ಉತ್ತೇಜಿಸು ವುದು ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ರೀತಿಯಲ್ಲಿತ್ತು ಎಂದು ಆರೋಪಿಸಿ ಐಪಿಸಿಯ ವಿವಿಧ ಸೆಕ್ಷನ್ ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ ಯಡಿ ಪ್ರಕರಣ ದಾಖಲಾಗಿತ್ತು. ಸಾಕ್ಷ್ಯಾಧಾರ ಗಳು ಇಲ್ಲ ಎಂಬ ಕಾರಣದಿಂದ ಅವರು 2013ರಲ್ಲಿ ಖುಲಾಸೆಗೊಂಡರು.

ಹಲವು ಪುಸ್ತಕಗಳು ಹಾಗೂ ಎರಡು ಕವನ ಸಂಕಲನಗಳನ್ನು ಬರೆದಿರುವ ಅವರು ಪತ್ರಿಕೆಗಳಿಗೆನಿಯಮಿತವಾಗಿ ಅಂಕಣಗಳನ್ನು ಬರೆಯುತ್ತಾರೆ.

ವರುಣ್‌ ಗಾಂಧಿ ಹೇಳಿದ್ದೇನು?

* ಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಹೂಡಿದ್ದ ಸತ್ಯಾಗ್ರಹದಲ್ಲಿ ಅವರ ಜೊತೆ ಧರಣಿ ನಡೆಸಿ ವೇದಿಕೆ ಹಂಚಿಕೊಂಡಿದ್ದ ಏಕೈಕ ಸಂಸದ ನಾನು

*ದ್ವೇಷಭಾಷಣದ ಘಟನೆ ಹಿಂದೆ ಹೋಗಿ ಬಹಳ ಕಾಲವಾಯಿತು. ಆ ಬಳಿಕ ನೂರಾರು ಕೆಲಸಗಳನ್ನು ನಾನು ಮಾಡಿದ್ದೇನೆ

*ದ್ವೇಷಭಾಷಣ ಒಂದುವಿಲಕ್ಷಣ ವಿಷಯ. ಈ ಪ್ರಕರಣದ ವಿರುದ್ಧ ನಾನು ಹೋರಾಡಿ ಗೆದ್ದಾಗ, ಆರೋಪ ಮಾಡಿದ್ದವರು ನನ್ನಲ್ಲಿ ಕ್ಷಮೆಯಾಚಿಸಿದರು

*ನಾನು ಪಕ್ಷ ರಾಜಕಾರಣದಲ್ಲಿ ದೊಡ್ಡ ಮಟ್ಟದ ಮತಬ್ಯಾಂಕ್ ಅಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಅದರ ಬಗ್ಗೆ ಯೋಚಿಸುವುದಿಲ್ಲ

*ಬಿಜೆಪಿಯ ಕಾರ್ಯಕರ್ತರಿಗೆ ಬದ್ಧತೆ ಹಚ್ಚು. ಕಠಿಣ ಪರಿಶ್ರಮ ಪಡುತ್ತಾರೆ. ಈ ದೇಶಕ್ಕೆ ಒಳ್ಳೆಯದನ್ನು ಮಾಡುವ ಇರಾದೆ ಹೊಂದಿದ್ದಾರೆ

***

ಬಿಜೆಪಿಯಲ್ಲಿರುವ ಕಮ್ಯುನಿಸ್ಟ್’ ಎಂದು ನನ್ನನ್ನು ಕಮ್ಯುನಿಸ್ಟ್ ಪಕ್ಷದವರು ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ
-ವರುಣ್ ಗಾಂಧಿ, ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT