ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಡಚ್‌ ಭದ್ರತಾ ಸಲಹೆಗಾರರ ಭೇಟಿ; ಉಕ್ರೇನ್‌ ವಿಚಾರ ಪ್ರಸ್ತಾಪ

Last Updated 31 ಮಾರ್ಚ್ 2022, 11:27 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್‌ ಮತ್ತು ಡಚ್‌ ಪ್ರಧಾನಿಗೆ ಭದ್ರತೆ, ವಿದೇಶಾಂಗ ನೀತಿಗಳ ಸಲಹೆಗಾರರಾಗಿರುವ ಜೆಫ್ರಿ ವ್ಯಾನ್‌ ಲ್ಯೂವೆನ್‌ ಅವರು ಗುರುವಾರ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಕ್ರೇನ್‌ ಪರಿಸ್ಥಿತಿಯ ಕುರಿತು ಚರ್ಚಿಸಲಾಗಿದೆ.

ತಮ್ಮ ಭೌಗೋಳಿಕ ಪ್ರದೇಶಗಳಲ್ಲಿನ ಇತ್ತೀಚಿನ ಘಟನೆಗಳ ಕುರಿತು ಭಾರತ ಮತ್ತು ನೆದರ್ಲೆಂಡ್ಸ್‌ನ ಭದ್ರತಾ ಸಲಹೆಗಾರರು ಮಾತನಾಡಿದರು. ಉಭಯ ರಾಷ್ಟ್ರಗಳು ಪ್ರಸ್ತುತ ನಡೆಯುತ್ತಿರುವ ಜಾಗತಿಕ ಬೆಳವಣಿಗೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಮುಖ್ಯವಾದುದೆಂದು ಅಭಿಪ್ರಾಯಪಟ್ಟಿವೆ.

ರಕ್ಷಣೆ, ಭದ್ರತೆ ಹಾಗೂ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಎರಡೂ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ವಿಸ್ತರಿಸಲು ಸಮ್ಮತಿಸಿವೆ. ಜಾಗತಿಕ ಬೆಳವಣಿಗೆಗಳು ಹಾಗೂ ಉಭಯ ರಾಷ್ಟ್ರಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಚರ್ಚಿಸಿರುವುದಾಗಿ ವರದಿಯಾಗಿದೆ.

ಉಕ್ರೇನ್‌ನಲ್ಲಿ ಯುದ್ಧ ಪರಿಸ್ಥಿತಿ ಗಂಭೀರ ಸ್ಪರೂಪ ಪಡೆದುಕೊಳ್ಳುತ್ತಿದ್ದಂತೆ ಡಚ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ್ದರು. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಹಾಗೂ ಉಕ್ರೇನ್‌ಗೆ ಅಗತ್ಯ ಸಹಕಾರ ನೀಡುವ ಬಗ್ಗೆ ಪ್ರಸ್ತಾಪಿಸಿದ್ದರು.

ಭಾರತ ಮತ್ತು ನೆದರ್ಲೆಂಡ್ಸ್‌ ನಡುವಿನ ಸಂಬಂಧಕ್ಕೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಏಪ್ರಿಲ್‌ 4ರಿಂದ 7ರವರೆಗೂ ನೆದರ್ಲೆಂಡ್ಸ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ರಾಜ ಮತ್ತು ರಾಣಿಯ ಆಹ್ವಾನದ ಮೇರೆಗೆ ರಾಷ್ಟ್ರಪತಿ ಕೋವಿಂದ್‌ ಅವರ ಭೇಟಿ ನಿಗದಿಯಾಗಿದೆ.

ರಷ್ಯಾದ ಆಕ್ರಮಣದ ಮುಂದುವರಿದಿರುವ ಬೆನ್ನಲ್ಲೇ ರಷ್ಯಾದೊಂದಿಗೆ ವ್ಯಾಪಾರ –ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಡಚ್‌ ಸಂಸತ್ತಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT