ಶುಕ್ರವಾರ, ಅಕ್ಟೋಬರ್ 30, 2020
19 °C
ಕಗ್ಗಂಟಾಗಿಯೇ ಉಳಿದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ

ತಮಿಳುನಾಡಿನ ಹಿತಾಸಕ್ತಿಗಾಗಿ ಮುಂದಿನ ನಿರ್ಧಾರ: ಪನ್ನೀರ್‌ಸೆಲ್ವಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತು ಮೌನ ಮುರಿದಿರುವ ತಮಿಳುನಾಡಿನ ಉಪಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ, ಎಐಎಡಿಎಂಕೆ ಪಕ್ಷವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಂದೇಶ ರವಾನಿಸಿದ್ದಾರೆ.

’ತಮಿಳುನಾಡಿನ ಜನತೆ ಮತ್ತು ಪಕ್ಷದ ಕಾರ್ಯಕರ್ತರ ಹಿತಾಸಕ್ತಿ ದೃಷ್ಟಿಯಿಂದಲೇ ಯಾವಾಗಲೂ ನಿರ್ಧಾರ ಕೈಗೊಂಡಿದ್ದೇನೆ. ಭವಿಷ್ಯದಲ್ಲಿಯೂ ಇದೇ ರೀತಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಪನ್ನೀರ್‌ಸೆಲ್ವಂ ಸೋಮವಾರ ಟ್ವೀಟ್‌ ಮಾಡಿದ್ದಾರೆ.

’ಇದುವರೆಗೆ ಏನು ನಡೆದಿದೆಯೋ ಒಳ್ಳೆಯದಕ್ಕಾಗಿಯೇ ನಡೆದಿದೆ. ಈಗ ನಡೆಯುತ್ತಿರುವುದು ಸಹ ಒಳ್ಳೆಯದಕ್ಕೆ. ಮುಂದೆ ನಡೆಯುವುದು ಸಹ ಒಳ್ಳೆಯದಕ್ಕೆ’ ಎಂದು ಭಗವದ್ಗೀತೆಯ ಸಂದೇಶವನ್ನು ಅವರು ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ನೇರವಾಗಿಯೇ ಈ ಸಂದೇಶ ನೀಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

2021ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಲು ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಅವರ ನಡುವೆ ಬಿರುಸಿನ ಪೈಪೋಟಿ ನಡೆದಿದೆ. ಅಕ್ಟೋಬರ್‌ 7ರಂದು ಅಭ್ಯರ್ಥಿ ಆಯ್ಕೆಯನ್ನು ಘೋಷಿಸುವ ಸಾಧ್ಯತೆ ಇದೆ. ಆದರೆ, ಪಕ್ಷವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಹಿಂದಿನ ಉದ್ದೇಶ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ಪಳನಿಸ್ವಾಮಿ ಅವರಿಗೆ ಬಹುತೇಕ ಶಾಸಕರು, ಮುಖಂಡರ ಬೆಂಬಲವಿದೆ ಎನ್ನಲಾಗಿದೆ. ಆದರೆ, ಪನ್ನೀರ್‌ಸೆಲ್ವಂ ಅವರು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಘೋಷಿಸದಂತೆ ಈಗಾಗಲೇ ಎರಡು ಬಾರಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೂರನೇ ಬಾರಿಯೂ ಇದೇ ಪ್ರಯತ್ನದಲ್ಲಿದ್ದಾರೆ.  ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದನ್ನು ಪನ್ನೀರ್‌ಸೆಲ್ವಂ ಪ್ರಶ್ನಿಸಿದ್ದಾರೆ. ಹೀಗಾಗಿಯೇ ಈ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು