ಮಂಗಳವಾರ, ಏಪ್ರಿಲ್ 20, 2021
26 °C

ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವರ್ಗಕ್ಕೆ ಮೀಸಲು ಶೇ 50 ಮೀರದಿರಲಿ: ಸುಪ್ರೀಂ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ನಿಗದಿಪಡಿಸುವ ಮೀಸಲಾತಿಯೂ ಒಳಗೊಂಡು ಒಟ್ಟು ಮೀಸಲು ಪ್ರಮಾಣ ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.

ಒಬಿಸಿಗೆ ನಿಗದಿಪಡಿಸುವ ಮೀಸಲಾತಿ ಪ್ರಮಾಣವು ನಿರ್ದಿಷ್ಟವಾಗಿರಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಒಳಗೊಂಡು ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಪೀಠವು ವಿವರಿಸಿದೆ.

ನ್ಯಾಯಮೂರ್ತಿ ಎ.ಎಂ.ಖಾನ್‌ವಿಲ್ಕರ್‌ ನೇತೃತ್ವದ ತ್ರಿಸದಸ್ಯರ ಪೀಠವು, ಮಹಾರಾಷ್ಟ್ರ ಜಿಲ್ಲಾ ಪರಿಷತ್‌ ಮತ್ತು ಪಂಚಾಯತ್ ಸಮಿತಿ ಕಾಯ್ದೆ 1961ರನ್ನು ಓದಿ ಹೇಳಿತು. ಇಲ್ಲಿ ಒಬಿಸಿಗೆ ಮೀಸಲಾತಿ ಪ್ರಮಾಣವು ಶೇ 27ರವರೆಗೂ ಇರಬಹುದು. ಆದರೆ, ಒಟ್ಟಾಗಿ ಗರಿಷ್ಠ ಪ್ರಮಾಣ ಶೇ 50ರ ಮಿತಿಯಲ್ಲಿದೆ ಎಂದು ಹೇಳಿತು.

ಇದೇ ಸಂದರ್ಭದಲ್ಲಿ ಪೀಠವು ಮಹಾರಾಷ್ಟ್ರದ ವಾಶಿಂ, ಅಕೋಲಾ, ನಾಗಪುರ, ಭಂಡಾರ ಜಿಲ್ಲೆಗಳಲ್ಲಿ ಒಬಿಸಿಗೆ ನಿಗದಿಪಡಿಸಿದ್ದ ಸೀಟುಗಳ ಫಲಿತಾಂಶವನ್ನು ಅನೂರ್ಜಿತಗೊಳಿಸಿದ್ದು, ಎರಡು ವಾರಗಳಲ್ಲಿ ಈ ಸ್ಥಾನಗಳಿಗೆ ಹೊಸದಾಗಿ ಚುನಾವಣೆ ಘೋಷಿಸಬೇಕು ಎಂದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.

ಒಬಿಸಿಗೆ ನಿಗದಿಪಡಿಸುವ ಮೀಸಲಾತಿ ಪ್ರಮಾಣವು ಕೇವಲ ’ಶಾಸನಾತ್ಮಕ’. ರಾಜ್ಯಗಳು ರೂಪಿಸುವ ಕಾಯ್ದೆಯಡಿ ಇದನ್ನು ತೀರ್ಮಾನಿಸಬಹುದು. ಆದರೆ ಇದು, ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ ಇರುವಂತೆ ಸಂವಿಧಾನಿಕ ಮೀಸಲಾತಿ ಆಲ್ಲ. ಈ ವರ್ಗಗಳಿಗೆ ಜನಸಂಖ್ಯೆಯನ್ನು ಆಧರಿಸಿ ಸಾಂವಿಧಾನಿಕ ಮೀಸಲಾತಿಯಂತೆ ನಿಗದಿಯಾಗಲಿದೆ ಎಂದಿತು.

ಒಂದು ವೇಳೆ, ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನಿಕ ಮೀಸಲಾತಿಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರೇ ಶೇ 50ರಷ್ಟೂ ಸೀಟುಗಳನ್ನು ಅಥವಾ ಕೆಲ ಶೆಡ್ಯೂಲ್‌ ವಲಯಗಳಲ್ಲಿ ಶೇ 50ರಷ್ಟು ಮೀರಿ ಬಳಸಿದರೆ, ಆಗ ಒಬಿಸಿ ವರ್ಗಕ್ಕೆ ಸೀಟು ಮೀಸಲಾತಿ ನಿಗದಿಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದೂ ಪೀಠ ವಿವರಿಸಿತು.

ಕೆ.ಕೃಷ್ಣಮೂರ್ತಿ (ಡಾ) ವರ್ಸಸ್‌ ಭಾರತ ಸರ್ಕಾರ (2019) ಪ್ರಕರಣ ಕುರಿತು ಸಂವಿಧಾನ ಪೀಠದ ನಿರ್ಧಾರವನ್ನು ಉಲ್ಲೇಖಿಸಿದ ಕೋರ್ಟ್, ಒಬಿಸಿ ವರ್ಗಕ್ಕೆ ಮೀಸಲಾತಿ ನೀಡುವ ಮುನ್ನ ಹಿಂದುಳಿರುವಿಕೆ ಕುರಿತ ಅಂಕಿ ಅಂಶಗಳು, ನಿಗದಿಪಡಿಸುವ ಮೀಸಲು ಪ್ರಮಾಣ, ಆಯೋಗದ ವರದಿಗಳು, ಎಸ್‌ಸಿ, ಎಸ್‌ಟಿ, ಒಬಿಸಿ ಒಟ್ಟು ಪ್ರಮಾಣ ಶೇ 50 ಮೀರದು ಎಂದು ಪರಿಶೀಲಿಸಿ, ಖಾತರಿಪಡಿಸಿಕೊಳ್ಳಲು ನಿಯೋಜಿತ ಆಯೋಗವನ್ನು ರಚಿಸಬೇಕು ಎಂದು ಪೀಠವು ಹೇಳಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು