ಗುರುವಾರ , ಮೇ 19, 2022
21 °C
ಚುನಾವಣೆಗೆ 3 ತಿಂಗಳ ಕಾಲಾವಕಾಶಕ್ಕೆ ಮನವಿ

ಹಿಂದುಳಿದವರಿಗೆ ಮೀಸಲಾತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಬಳಿಕವೇ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಬಗ್ಗೆ ಚರ್ಚಿಸಿದರು.

‘ಹೊಸದಾಗಿ ರಚಿಸಿರುವ ನ್ಯಾಯ ಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗದ ಮೂಲಕ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿ, ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸಲು ಮೂರು ತಿಂಗಳು ಸಮಯಾವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ. ಈ ಮನವಿಯನ್ನು ನ್ಯಾಯಾಲಯ ಒಪ್ಪದಿದ್ದರೆ, ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಹಿಂದಿನ ಚುನಾವಣೆಯನ್ನು ಆಧಾರವಾಗಿಟ್ಟುಕೊಂಡು ರೋಸ್ಟರ್‌ ಬದಲಿಸಿ ಮೀಸಲಾತಿ ಕಲ್ಪಿಸಿ ಚುನಾವಣೆ ನಡೆಸಲು ಅವಕಾಶ ಕೋರುವ ನಿರ್ಧಾರ ವನ್ನೂ ಮಾಡಲಾಯಿತು’ ಎಂದು ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂಬುದು ರಾಜ್ಯ ಸರ್ಕಾರದ ಖಚಿತ ನಿಲುವು. ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ತ್ವರಿತವಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಭಕ್ತವತ್ಸಲ ನೇತೃತ್ವದ ಆಯೋಗಕ್ಕೆ ಪತ್ರವನ್ನೂ ಬರೆಯಲಾಗಿದೆ ಎಂದರು.

ಎರಡು ವಾರದೊಳಗೆ ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಬಾಕಿ ಇದೆ. ಪುರಸಭೆಗಳಾಗಿರುವ ಗ್ರಾಮ ಪಂಚಾಯಿತಿಗಳಲ್ಲೂ ಚುನಾವಣೆ ಬಾಕಿ ಇದೆ. ಹಿಂದುಳಿದ ವರ್ಗಗಳ ಮೀಸಲಾತಿಗೆ ತೊಂದರೆ ಆಗದಂತೆ ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದರು.

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಜುಲೈ 12ಕ್ಕೆ ನಿಗದಿಯಾಗಿದೆ. ಹೈಕೋರ್ಟ್‌ನಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಅರ್ಜಿ ಬಾಕಿ ಇದೆ. ಎರಡೂ ಕಡೆಗಳಲ್ಲಿ ನ್ಯಾಯಾಲಯಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು