ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌: ವಿದೇಶಗಳಿಂದ ಬರುವವರಿಗೆ ಆರ್‌ಟಿ ಪಿಸಿಆರ್‌ ಪರೀಕ್ಷೆ ಕಡ್ಡಾಯ

‘ಹೆಚ್ಚು ಅಪಾಯ’ದ ದೇಶಗಳಿಂದ ಬರುವವರ ಮೇಲೆ ನಿಗಾ
Last Updated 30 ನವೆಂಬರ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಗಳಿಂದ ಅದರಲ್ಲೂ ವಿಶೇಷವಾಗಿ ಓಮೈಕ್ರಾನ್‌ ಪ್ರಕರಣಗಳು ದೃಢಪಟ್ಟಿರುವ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮಂಗಳವಾರ ಸೂಚಿಸಿದೆ.

ಭಾರತದಲ್ಲಿ ಈವರೆಗೆ ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ, ‘ಹೆಚ್ಚು ಅಪಾಯ’ (ಓಮೈಕ್ರಾನ್‌ ಪ್ರಕರಣಗಳು ದೃಢ
ಪಟ್ಟಿರುವ ದೇಶಗಳು) ಇರುವ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರನ್ನು ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು. ವಿಮಾನ ನಿಲ್ದಾಣದಲ್ಲಿ ಬಂದು ಇಳಿದ ಕೂಡಲೇ ಪರೀಕ್ಷೆ ನಡೆಸಬೇಕು. ಕೋವಿಡ್‌ ದೃಢಪಡದ ಪ್ರಯಾಣಿಕರಿಗೆ ಎಂಟನೇ ದಿನ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು ಎಂದು ಮಾರ್ಗಸೂಚಿ ಹೇಳಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರೀಕ್ಷೆಯನ್ನು ಹೆಚ್ಚಿಸ ಬೇಕು, ನಿಗಾವನ್ನು ಕಟ್ಟುನಿಟ್ಟುಗೊಳಿಸಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಸಲಹೆ ನೀಡಿದ್ದಾರೆ. ವಿದೇಶಿ ಪ್ರಯಾಣಿಕರು ಬರುವ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಭೂ ಗಡಿಗಳಲ್ಲಿ ಹೆಚ್ಚಿನ ಕಣ್ಗಾವಲು ಬೇಕು ಎಂದು ಅವರು ಸೂಚಿಸಿದ್ದಾರೆ.

‘ಹೆಚ್ಚು ಅಪಾಯ’ದ ದೇಶಗಳ ಪಟ್ಟಿಯನ್ನು ನವೆಂಬರ್‌ 26ರಂದು ಪರಿಷ್ಕರಿಸಲಾಗಿದೆ. ಈ ಪಟ್ಟಿಯಲ್ಲಿ ಯುರೋಪ್‌ನ ಕೆಲವು ದೇಶಗಳು, ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾ ದೇಶ, ಬೋಟ್ಸ್‌ವಾನ, ಚೀನಾ, ಮಾರಿಷಸ್‌, ನ್ಯೂಜಿಲ್ಯಾಂಡ್‌, ಜಿಂಬಾಬ್ವೆ, ಸಿಂಗಪುರ, ಇಸ್ರೇಲ್‌ ಮತ್ತು ಹಾಂಗ್‌ಕಾಂಗ್‌ ಇವೆ. ಈ ಎಲ್ಲ ದೇಶಗಳಲ್ಲಿ ಓಮೈಕ್ರಾನ್‌ ಪ್ರಕರಣಗಳು ದೃಢಪಟ್ಟಿವೆ.

ಮಾರ್ಗಸೂಚಿಯಲ್ಲಿ ಏನಿದೆ?

*ಓಮೈಕ್ರಾನ್‌ ಪ್ರಕರಣಗಳು ದೃಢಪಟ್ಟ ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆ ಕಡ್ಡಾಯ

*ಪರೀಕ್ಷೆಯ ಫಲಿತಾಂಶ ಬಂದ ಬಳಿಕವೇ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ

* ಇತರ ದೇಶಗಳಿಂದ ಬರುವ ಶೇ 5ರಷ್ಟು ‍ಪ್ರಯಾಣಿಕರನ್ನೂ ಪರೀಕ್ಷೆಗೆ ಒಳಪಡಿಸಬೇಕು

* ಕೋವಿಡ್‌ ದೃಢಪಟ್ಟ ವ್ಯಕ್ತಿಗಳನ್ನು ಸಾಂಸ್ಥಿಕ ಪ್ರತ್ಯೇಕವಾಸಕ್ಕೆ ಒಳಪಡಿಸಬೇಕು

*ಕೋವಿಡ್‌ ದೃಢಪಟ್ಟವರ ಸಂಪರ್ಕಿತರನ್ನು ಸಾಂಸ್ಥಿಕ/ಮನೆ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗುವುದು, ಇವರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಬೇಕು

*ಪರೀಕ್ಷೆಗೆ ಒಳಪಡದವರು ಮತ್ತು ಆರ್‌ಟಿ–ಪಿಸಿಆರ್‌ನಲ್ಲಿ ಕೋವಿಡ್‌ ಪತ್ತೆ ಆಗದವರ ಮೇಲೆಯೂ ನಿಗಾ ಮುಂದುವರಿಸಬೇಕು. 2 ಮತ್ತು 5ನೇ ದಿನ ಅವರನ್ನು ಗಮನಿಸಬೇಕು. ಲಕ್ಷಣಗಳು ಕಂಡು ಬಂದರೆ
ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು

* ‘ಹೆಚ್ಚು ಅಪಾಯ’ದ ದೇಶಗಳಿಂದ ಬರುವವರು ವಿಮಾನ ನಿಲ್ದಾಣದಲ್ಲಿ ಹೆಚ್ಚು ಸಮಯ ಇರುವುದಕ್ಕೆ ಸಿದ್ಧ
ರಾಗಿ ಬರಬೇಕು. ಆರ್‌ಟಿ–ಪಿಸಿಆರ್‌ ಪರೀಕ್ಷೆ ಫಲಿತಾಂಶ ಬರುವ ತನಕ ಬೇರೆಡೆಗೆ ಹೋಗುವುದಕ್ಕಾಗಿ ವಿಮಾನ ಟಿಕೆಟ್‌ ಕಾಯ್ದಿರಿಸಬೇಡಿ ಎಂದು ಸಲಹೆ ನೀಡಲಾಗಿದೆ

* ಕೋವಿಡ್‌ ದೃಢಪಟ್ಟ ಎಲ್ಲ ಮಾದರಿಗಳನ್ನು ಭಾರತದ ಸಾರ್ಸ್‌ ಕೋವಿಡ್‌ ಕನ್‌ಸೋರ್ಷಿಯಂ ಪ್ರಯೋಗಾಲಯಕ್ಕೆ ರವಾನೆ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT