ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಲಲಿತಾ ಆಪ್ತ ಪನ್ನೀರ ಸೆಲ್ವಂಗೆ ಅಸಮರ್ಥತೆ, ಶಶಿಕಲಾ ಕುರಿತ ನಿಲುವೇ ಮುಳುವಾಯ್ತೆ?

Last Updated 12 ಜುಲೈ 2022, 4:51 IST
ಅಕ್ಷರ ಗಾತ್ರ

ಫೆಬ್ರುವರಿ 2002 ರಲ್ಲಿ ಜೆ. ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದಾಗ ಐದು ತಿಂಗಳ ಕಾಲ ತಮಿಳುನಾಡು ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಿದ್ದ ಒ ಪನ್ನೀರ ಸೆಲ್ವಂ ಅವರನ್ನು ಎಐಎಡಿಎಂಕೆಯಲ್ಲಿ 'ಅಮ್ಮ'ನ ನಂತರದ ಅಗ್ರ ನಾಯಕ ಎಂದೇ ಬಿಂಬಿಸಲಾಗಿತ್ತು. ಜಯಲಲಿತಾ 2014 ರಲ್ಲಿ ಮತ್ತೆ ಜೈಲು ಸೇರಿದಾಗ ಸಿಎಂ ಸ್ಥಾನಕ್ಕೆ ಪನ್ನೀರ ಸೆಲ್ವಂ ಅವರ ಆಯ್ಕೆ ಸ್ವಾಭಾವಿಕವಾಗಿತ್ತು.

75 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಡಿಸೆಂಬರ್ 5, 2016 ರಂದು ಜಯಲಲಿತಾ ನಿಧನರಾದ ಬಳಿಕ ಅವರ ಸ್ಥಾನ ತುಂಬಲು ಒಪಿಎಸ್ ಪ್ರಯತ್ನ ನಡೆಸಿದ್ದರು. ಜಯಲಲಿತಾ ಅವರ ಅಚ್ಚುಮೆಚ್ಚಿನ ವ್ಯಕ್ತಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದರೂ, ಪನ್ನೀರ ಸೆಲ್ವಂ ಅವರು ಅಧಿಕಾರದಲ್ಲಿದ್ದಾಗ ಎಂದಿಗೂ ತಮ್ಮ ಪ್ರಭಾವವನ್ನು ಪ್ರದರ್ಶಿಸಲಿಲ್ಲ. ಹೀಗಾಗಿ, ಎಐಎಡಿಎಂಕೆ (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ನಾಯಕರು ಮತ್ತು ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುವಲ್ಲಿ ವಿಫಲರಾದರು.

ವಿಫಲ ಬಂಡಾಯ ನಾಯಕ

ಫೆಬ್ರುವರಿ 7, 2017ರ ರಾತ್ರಿ ಮರೀನಾ ಬೀಚ್‌ನಲ್ಲಿ ಜಯಲಲಿತಾ ಅವರ ಬಹುಕಾಲದ ಗೆಳತಿ ವಿ ಕೆ ಶಶಿಕಲಾ ವಿರುದ್ಧ ಬಂಡಾಯದ ಬಾವುಟವನ್ನು ಎತ್ತುವ ಮೂಲಕ ತಮ್ಮ ಗೋಲ್ಡನ್ ಸೈಲೆನ್ಸ್ ಅನ್ನು ಮುರಿದಾಗ, ಪನ್ನೀರ ಸೆಲ್ವಂ ಅವರು ಅಂತಿಮವಾಗಿ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು.

ಆದರೆ, ಅವರ ಹೊಸ ಜನಪ್ರಿಯತೆಯು ಅಲ್ಪಕಾಲಿಕವಾಗಿತ್ತು. ಪ್ರಬಲ ಭಾರತೀಯ ಜನತಾ ಪಕ್ಷವು ಅವರ ಹಿಂದೆ ಬಂಡೆಯಂತೆ ನಿಂತಿದ್ದರೂ ಮತ್ತು ಸಿ ವಿದ್ಯಾಸಾಗರ್ ರಾವ್ ಅವರಂತಹ ಸ್ನೇಹ ಪರ ರಾಜ್ಯಪಾಲರ ಹೊರತಾಗಿಯೂ, ಎಐಎಡಿಎಂಕೆ ಮೇಲೆ ಶಶಿಕಲಾ ಅವರ ಬಿಗಿ ಹಿಡಿತವನ್ನು ಕಳಚಲು ಸಾಧ್ಯವಾಗಲಿಲ್ಲ.

134 ಶಾಸಕರಲ್ಲಿ ಪನ್ನೀರ್ ಬಣದಲ್ಲಿ 11 ಮಂದಿ ಮಾತ್ರ

ಆಗ ಅವರು ಯಶಸ್ವಿಯಾಗಿದ್ದರೆ, ಸೋಮವಾರ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ವ್ಯಕ್ತಿ (ಎಡಪ್ಪಾಡಿ ಕೆ ಪಳನಿಸ್ವಾಮಿ ಎಂದು ಓದಿ) ಈಗ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಎಐಎಡಿಎಂಕೆಯ 134 ಶಾಸಕರ ಪೈಕಿ 11 ಮಂದಿ ಮಾತ್ರ ಪನ್ನೀರ ಸೆಲ್ವಂ ಬಣದಲ್ಲಿದ್ದರು.ಪನ್ನೀರ ಸೆಲ್ವಂ ಮತ್ತು ಅವರ 11ಬೆಂಬಲಿಗರು ತಮ್ಮ ಸರ್ಕಾರದ ವಿರುದ್ಧ ಮತ ಚಲಾಯಿಸಿದರೂ 122 ಮತಗಳೊಂದಿಗೆ ಪಳನಿ ಸ್ವಾಮಿ ಗೆದ್ದಿದ್ದರು. ಅಂದಿನಿಂದ, ಸಂಪುಟದಲ್ಲಿ ಮತ್ತು ಪಕ್ಷದ ಶ್ರೇಣಿಯಲ್ಲಿ ತಮಗಿಂತ ಕಿರಿಯರಾಗಿರುವ ಪಳನಿಸ್ವಾಮಿ ಅವರನ್ನು ಸೋಲಿಸಲು ಪನ್ನೀರ್ ಅವರಿಗೆ ಸಾಧ್ಯವಾಗಿಲ್ಲ.

ಇಪಿಎಸ್ ಎದುರು ಕ್ರಮೇಣ ಕುಸಿದ ಒಪಿಎಸ್

ಮುಖ್ಯಮಂತ್ರಿಗಾದಿ, 2021 ರ ರಾಜ್ಯ ಚುನಾವಣೆಗಳಲ್ಲಿ ಎಐಎಡಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನ. ಇವು ಪಳನಿಸ್ವಾಮಿ ಎದುರು ಪನ್ನೀರ ಸೆಲ್ವಂ ಸೋತ ಮೂರು ದೊಡ್ಡ ಹುದ್ದೆಗಳಾಗಿವೆ. ಸೋಮವಾರ, ಇಪಿಎಸ್ ನೇತೃತ್ವದ ಬಣವು ಒಪಿಎಸ್ ಅವರನ್ನು ಪಕ್ಷದ ಸಂಯೋಜಕ ಹುದ್ದೆಯಿಂದ ಬಿಡುಗಡೆ ಮಾಡುವುದಲ್ಲದೆ, ಅವರನ್ನು ಎಐಎಡಿಎಂಕೆ ಹೊರಹಾಕಿದಾಗ ಅವರಿಗೆ ತೀವ್ರ ಅಪಮಾನ ಉಂಟಾಗಿದೆ.

ಒಪಿಎಸ್ ಮುಂದೆ ಇರುವ ಆಯ್ಕೆಗಳು ಸೀಮಿತವಾಗಿವೆ: ಅವರು ನ್ಯಾಯಾಲಯಕ್ಕೆ ಮತ್ತು ಪ್ರಾಯಶಃ ಚುನಾವಣಾ ಆಯೋಗಕ್ಕೆ ಹೋಗುವುದು ಖಚಿತ. ಆದರೆ, ಅದು ದೀರ್ಘಾವಧಿಯ ಹೋರಾಟವಾಗಿರುತ್ತದೆ. ಇಡೀ ಎಐಎಡಿಎಂಕೆ ಪಳನಿಸ್ವಾಮಿಯವರ ಪರ ನಿಂತಿರುವುದರಿಂದ ಬಿಜೆಪಿ ಇನ್ನು ಮುಂದೆ ಅವರನ್ನು ಸಂಪೂರ್ಣವಾಗಿ ಬೆಂಬಲಿಸುವ ಸ್ಥಿತಿಯಲ್ಲಿಲ್ಲ ಎಂಬುದನ್ನು ಒಪಿಎಸ್ ನೆನಪಿನಲ್ಲಿಟ್ಟುಕೊಳ್ಳಬೇಕು. ಒಪಿಎಸ್ ಶಶಿಕಲಾ ಪರವಾಗಿ ನಿಲ್ಲಬಹುದು. ಆದರೆ, ಫೆಬ್ರವರಿ 2021 ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಪಕ್ಷದಲ್ಲಿ ಹಿಡಿತ ಸಾಧಿಸಲು ಅವರಿಗೆ ಸಾಧ್ಯವಾಗಿಲ್ಲ.

ಶಶಿಕಲಾ ವಿರುದ್ಧದ ಬಂಡಾಯದ ಬಳಿಕ ಎಐಎಡಿಎಂಕೆಯಲ್ಲಿ ಪಳನಿಸ್ವಾಮಿಯಿಂದ ನಿಯಂತ್ರಿಸಲ್ಪಟ್ಟ ಒಪಿಎಸ್, ಇಟ್ಟ ಹಲವಾರು ತಪ್ಪು ಹೆಜ್ಜೆಗಳು ಮತ್ತು ಕಷ್ಟದ ಸಮಯದಲ್ಲಿ ಅವರನ್ನು ಬೆಂಬಲಿಸಿದ ಜನರನ್ನು ನಿರಾಸೆಗೊಳಿಸಿದ್ದು, ಪಕ್ಷದೊಳಗೆ ಅವರ ಅವನತಿಗೆ ಕಾರಣವಾಯಿತು.

ಪಕ್ಷದ ಸಾಮಾನ್ಯ ಮಂಡಳಿ ಸಭೆಗೂ ಮುನ್ನ ಅವರ ಕೆಲ ನಿರ್ಧಾರಗಳು ಹತಾಶೆಯ ಗಡಿ ತಲುಪಿದ್ದವು. ಸಭೆಯ ಮೇಲೆ ನಿಷೇಧವನ್ನು ಕೋರಿ ಅವರು ನ್ಯಾಯಾಂಗದ ಬಾಗಿಲು ತಟ್ಟಿದ್ದರು, ಈ ಕ್ರಮವು ಅವರನ್ನು ಪಕ್ಷದಿಂದ ಮತ್ತಷ್ಟು ದೂರವಿಟ್ಟಿತು. ರಾಜಕೀಯ ವಿಶ್ಲೇಷಕರ ಪ್ರಕಾರ, ಒಪಿಎಸ್ ಬೆಂಬಲಿಗರು ಎಐಎಡಿಎಂಕೆ ಪ್ರಧಾನ ಕಚೇರಿಯೊಳಗೆ ನುಗ್ಗಿ ದಾಂಧಲೆ ನಡೆಸಿದ್ದು ದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತದೆ.

ಶಶಿಕಲಾ ಸಂದಿಗ್ಧತೆ

ಶಶಿಕಲಾ ಅವರು ಜಯಲಲಿತಾ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದ ಒಪಿಎಸ್, ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ಅವರೊಂದಿಗೆ ಖಾಸಗಿ ಸಭೆ ನಡೆಸಿದ್ದರು ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು. ಹೀಗಾಗಿ, ಒಪಿಎಸ್ ಯಾವುದೇ ದಿನ ಬದಲಾಗಬಹುದು ಮತ್ತು ಶಶಿಕಲಾ ಕುಟುಂಬದ ಬೆಂಬಲಿಗನಾಗಬಹುದು ಎಂಬುದನ್ನು ಇಪಿಎಸ್ ಊಹಿಸಿದ್ದರು.

2021ರ ಚುನಾವಣೆಯಲ್ಲಿ ಪಕ್ಷ ಸೋತ ನಂತರ ಒಪಿಎಸ್ ಅವರು, ಶಶಿಕಲಾ ವಿರುದ್ಧ ಮಿಶ್ರ ಸಂಕೇತಗಳನ್ನು ನೀಡಿದರು. ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಅದು ಸರಿ ಎನಿಸಲಿಲ್ಲ. ಅವರು ಶಶಿಕಲಾ ಅವರೊಂದಿಗೆ ಹೊಂದಾಣಿಕೆಗೆ ಸಿದ್ಧ ಎಂದು ಸುಳಿವು ನೀಡುವುದನ್ನು ಮುಂದುವರೆಸಿಕೊಂಡೇ ಬಂದರು. ಆದರೆ, ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ.

ಸಂಯೋಜಕರಾಗಿದ್ದರೂ ಸಹ, ಓಪಿಎಸ್ 2021ರ ಚುನಾವಣಾ ಪ್ರಚಾರಕ್ಕೆ ಹೆಚ್ಚಾಗಿ ಗೈರುಹಾಜರಾಗುವ ಮೂಲಕ ಪಕ್ಷದ ನಾಯಕರಾಗಿ ತಮ್ಮ ಜವಾಬ್ದಾರಿಯನ್ನು ಬಹುತೇಕ ತ್ಯಜಿಸಿದ್ದರು. ಇದು ಇಪಿಎಸ್ ಏಕಾಂಗಿಯಾಗಿ ಹೋರಾಟ ನಡೆಸಿದ ಚುನಾವಣೆಯಾದರೂ ಸಹ ಎಐಎಡಿಎಂಕೆಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊರಹಾಕಿತು.

‘ಅಮ್ಮ(ಜಯಲಲಿತಾ) ಮರಣದ ನಂತರ, ಅವರು(ಪನ್ನೀರ ಸೆಲ್ವಂ) ಇಪಿಎಸ್ ಬಣದ ಒತ್ತಡಕ್ಕೆ ಮಣಿಯುತ್ತಲೇ ಇದ್ದರು. ಅವರಿಗೆ ಜನಬೆಂಬಲವಿಲ್ಲ ಎಂಬುದು ಪಕ್ಷದಲ್ಲಿ ಬಹಿರಂಗ ರಹಸ್ಯವಾಗಿತ್ತು. ಪಕ್ಷ ಅಧಿಕಾರ ಕಳೆದುಕೊಂಡ ನಂತರವಾದರೂ ಒಪಿಎಸ್ ತಮ್ಮ ಸ್ಥಾನವನ್ನು ಪ್ರತಿಪಾದಿಸಬೇಕಿತ್ತು. ಆದರೆ, ಅವರು ಅದನ್ನು ಮಾಡದೇ ದೂರವಿದ್ದರು’ಎಂದು ಎಐಎಡಿಎಂಕೆ ನಾಯಕರೊಬ್ಬರು ಹೇಳಿದರು.

ಕೊನೆಯ ಮೊಳೆ

ಪಕ್ಷವು ಗೆಲ್ಲಬಹುದಾದ ಎರಡು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ತಮ್ಮ ಬಣಕ್ಕೆ ನೀಡುವಂತೆ ಒಪಿಎಸ್ ಗಟ್ಟಿಯಾಗಿ ನಿಂತಿದ್ದರು. ಆ ಬಳಿಕ, ಜೂನ್ 14 ರಂದು ನಡೆದ ಪಕ್ಷದ ಸಭೆಯಲ್ಲಿ ಇಪಿಎಸ್ ಬೆಂಬಲಿಗರು ನಾಯಕತ್ವದ ಸಮಸ್ಯೆಯನ್ನು ಎತ್ತಿದಾಗ ಉಭಯ ನಾಯಕತ್ವದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ನಂಬಿದ್ದ ಒಪಿಎಸ್ ಕಕ್ಕಾಬಿಕ್ಕಿಯಾಗಿದ್ದರು.

‘ಓಪಿಎಸ್ ಅವರು ಜಯಲಲಿತಾ ನಂತರದ ಎಐಎಡಿಎಂಕೆಯ ಮ್ಯಾಕ್ ಬೆತ್ ಆಗಿದ್ದರು. ಅವರನ್ನು ಎರಡು ಬಾರಿ ಸ್ಟ್ಯಾಂಡ್ ಬೈ ಸಿಎಂ ಆಗಿ ಆಯ್ಕೆ ಮಾಡಿದ್ದ ಜಯಲಲಿತಾ ಅವರಿಂದ ಅಧಿಕಾರ ಕಸಿದುಕೊಳ್ಳಲು ಅವರು ಎಂದಿಗೂ ಪ್ರಯತ್ನಿಸಲಿಲ್ಲ. ಅವರು, ಒಮ್ಮೆ ಮಾತ್ರ ಮಹತ್ವಾಕಾಂಕ್ಷಿಯಾಗಿದ್ದರೂ ಸಹ ಶಶಿಕಲಾ ಅವರಿಂದ ತಳ್ಳಲ್ಪಟ್ಟರು. ಶಶಿಕಲಾ ಅವರ ಬಗೆಗಿನ ಅಸ್ಥಿರ ಮನೋಭಾವ ಮತ್ತು ಸಂದಿಗ್ಧತೆ ಅವರನ್ನು ಈ ಸ್ಥಿತಿಗೆ ತಂದಿದೆ. ಬಿಜೆಪಿ ಅವರಿಗೆ ಆಶ್ರಯ ನೀಡದಿದ್ದರೆ ಅವರ ಆಯ್ಕೆಗಳು ಬಹಳ ಸೀಮಿತವಾಗಿವೆ ಎಂದು ಹಿರಿಯ ಪತ್ರಕರ್ತ ಆರ್ ಭಗವಾನ್ ಸಿಂಗ್ ತಿಳಿಸಿದ್ದಾರೆ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT