ಮಂಗಳವಾರ, ಡಿಸೆಂಬರ್ 7, 2021
20 °C
ಕೇರಳದ ‘ಡ್ರೆಸ್‌ ಬ್ಯಾಂಕ್‌‘ * ವಿನೂತನ, ಉಚಿತ ಸೇವೆ * ದುಬಾರಿಯ ಸಾವಿರಾರು ಉಡುಗೆಗಳ ಸಂಗ್ರಹ

ಕೇರಳ: ಬಡ ವಧುವಿನ ಉಡುಗೆ ಸಂಭ್ರಮ ಹಿಗ್ಗಿಸುವ ‘ಬ್ಯಾಂಕ್‌'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ವಿವಾಹದ ದಿನ ಆಕರ್ಷಕ ವಿನ್ಯಾಸದ, ಗಮನಸೆಳೆವ ಉಡುಪಿನಲ್ಲಿ ಕಂಗೊಳಿಸುವುದು ಎಲ್ಲ ವಧುವಿನ ಕನಸು. ಆದರೆ, ಕುಟುಂಬದ ಆರ್ಥಿಕ ಸ್ಥಿತಿಯ ಕಾರಣ ಹಲವರ ಈ ಕನಸು ನನಸಾಗುವುದಿಲ್ಲ. ಇಂಥ ವಧುಗಳ ಕನಸು ಸಾಕಾರಗೊಳಿಸಲು ಇಲ್ಲೊಂದು ‘ಬ್ಯಾಂಕ್‌‘ ಕಾರ್ಯನಿರ್ವಹಿಸುತ್ತಿದೆ. ಅದು ‘ಡ್ರೆಸ್‌ ಬ್ಯಾಂಕ್‌!’

ವಧುವಿನ ಮದುವೆ ದಿನದ ಉಡುಗೆ ಎಂದರೆ ಅದು ಒಂದು ದಿನದ ಸಂಭ್ರಮ. ಹೆಚ್ಚಿನ ಸಂದರ್ಭಗಳಲ್ಲಿ ಆ ಉಡುಗೆಯನ್ನು ಮತ್ತೊಮ್ಮೆ ತೊಡುವ ಸಾಧ್ಯತೆಗಳು ವಿರಳಾತಿವಿರಳ. ಈಗ ‘ಡ್ರೆಸ್‌ ಬ್ಯಾಂಕ್‌’ ಮೂಲಕ ವಧುವಿನ ಇಂತಹ ಮರುಬಳಕೆಯಾಗದ ಉಡುಗೆಗಳು, ನವ ವಧುಗಳ ಕಂಗಳ ಹೊಳಪು ಹೆಚ್ಚಿಸಲು ಬಳಕೆ ಆಗುತ್ತಿವೆ.

ಮಲಪ್ಪುರಂ ಜಿಲ್ಲೆಯ ಪೆರಿಂತಾಲಮಣ್ಣದ ನಿವಾಸಿ ನಸರ್ ಥೂತಾ ಅವರ ಕಲ್ಪನೆಯ ಕೂಸು ಈ ‘ಡ್ರೆಸ್‌ ಬ್ಯಾಂಕ್’. 2020ರ ಮಾರ್ಚ್ ತಿಂಗಳು ಅಸ್ತಿತ್ವಕ್ಕೆ ಬಂದ ಈ ಬ್ಯಾಂಕ್‌ನಿಂದಾಗಿ, ಆರ್ಥಿಕವಾಗಿ ದುರ್ಬಲರಾದ ಅನೇಕ ಕುಟುಂಬಗಳ ಯುವತಿಯರು, ಮದುವೆಯ ದಿನ ನವ ವಿನ್ಯಾಸದ, ಆಕರ್ಷಕ ಉಡುಗೆ ತೊಟ್ಟು ಸಂಭ್ರಮಿಸಿದ್ದಾರೆ.

ಕೇರಳವಷ್ಟೇ ಅಲ್ಲದೆ ನೆರೆಯ ಕರ್ನಾಟಕ, ತಮಿಳುನಾಡು ರಾಜ್ಯಗಳ ಹಲವು ಕುಟುಂಬಗಳೂ ಈ ಡ್ರೆಸ್‌ ಬ್ಯಾಂಕ್‌ನ ಸೇವೆಯನ್ನು ಪಡೆದಿವೆ. ಪ್ರಸ್ತುತ, ಈ ಬ್ಯಾಂಕ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ದುಬಾರಿ ಬೆಲೆಯ ಉಡುಗೆಗಳು ಲಭ್ಯವಿವೆ. ಈ ಎಲ್ಲವನ್ನು ಮದುವೆ ದಿನ ಬಳಸಲು ಬಡ ಕುಟುಂಬಗಳ ವಧುವಿಗೆ ಉಚಿತವಾಗಿ ನೀಡಲಾಗುತ್ತದೆ.

ಎಂಟು ವರ್ಷದ ಹಿಂದೆ ದೇಶಕ್ಕೆ ಮರಳಿದ 44 ವರ್ಷದ ಈ ಮಾಜಿ ಎನ್‌ಆರ್‌ಐ ಈ ಮೂಲಕ ವಿಭಿನ್ನ ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮದುವೆಗಾಗಿ ಮಾಡಬೇಕಾದ ದುಬಾರಿ ವೆಚ್ಚದ ಜೊತೆಗೇ ವಧುವಿನ ಉಡುಗೆಗಾಗಿ ದುಬಾರಿ ಮೊತ್ತ ವ್ಯಯಿಸಬೇಕಾಗಿರುವ ಬಡ ಕುಟುಂಬಗಳ ತುಮುಲವನ್ನು ಕಂಡ ಅವರು ಅದಕ್ಕೆ ಪರಿಹಾರದ ಹುಡುಕಾಟ ಆರಂಭಿಸಿದರು. ಅದರ ಫಲವೇ ಈ ಡ್ರೆಸ್‌ ಬ್ಯಾಂಕ್.

ಕುಟುಂಬದ ಸದಸ್ಯರು, ಗೆಳೆಯರ ಬೆಂಬಲದೊಂದಿಗೆ ನಸರ್ ಅವರು ಆರಂಭದಲ್ಲಿ, ಉಳ್ಳವರ ಕುಟುಂಬದ ವಧು  ಒಮ್ಮೆ ಬಳಸಿದ ಉಡುಗೆಗಳನ್ನು ಸಂಗ್ರಹಿಸಿದರು. ಅದನ್ನೇ ಆಸುಪಾಸಿನ ಬಡ ಕುಟುಂಬದ ವಧುಗಳಿಗೆ ನೆರವು ನೀಡಿದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣಗಳ ಮೂಲಕ ಮನೆಮಾತಾಯಿತು. ಕೇರಳವಲ್ಲದೆ, ನೆರೆ ರಾಜ್ಯಗಳಿಂದಲೂ ನಸರ್ ಅವರಿಗೆ ಉಡುಗೆಯ ಕೊಡುಗೆಗಳು ಬರಲಾರಂಭಿಸಿದವು.

ಮುಸಲ್ಮಾನ, ಕ್ರೈಸ್ತರು, ಹಿಂದೂ ವಧುಗಳ  ಆಶಯ,ಸಂಪ್ರದಾಯಗಳಿಗೆ ಹೊಂದಿಕೆ ಆಗುವಂತೆ ಪ್ರಸ್ತುತ ಈ ಬ್ಯಾಂಕ್‌ನಲ್ಲಿ ಸುಮಾರು 1,000 ಸಾಂಪ್ರದಾಯಿಕ ಉಡುಗೆಗಳಿವೆ. ಇವುಗಳ ಮಾರುಕಟ್ಟೆ ದರ ₹ 5,000 ರಿಂದ ₹ 50,000ವರೆಗೆ ಇದೆ. ಅನಿವಾಸಿ ಭಾರತೀಯರೂ ಕೊಡುಗೆ ನೀಡಿದ್ದಾರೆ. ಬ್ಯಾಂಕ್‌ನ ಉಡುಗೆಗಳ ನೆರವು ಪಡೆಯಲು ಕರ್ನಾಟಕ, ತಮಿಳುನಾಡಿನ ಕೆಲ ಕುಟುಂಬಗಳು ಕೂಡಾ ಸಂಪರ್ಕಿಸಿವೆ ಎನ್ನುತ್ತಾರೆ ನಸರ್.

ಬಹುತೇಕ ಎಲ್ಲ ಉಡುಗೆಗಳು ಒಮ್ಮೆ ಮಾತ್ರ, ಕೆಲವೇ ಗಂಟೆಗಳ ಅವಧಿಗೆ ಧರಿಸಿರುವಂತಹವು. ಬಹುತೇಕ ಉಡುಗೆಗಳು ಹೊಚ್ಚ ಹೊಸತಾಗಿಯೇ ಇವೆ. ಆದರೂ, ಬಳಕೆಗೆ ನೀಡುವ ಮುನ್ನ ಅವುಗಳನ್ನು ಒಗೆದು, ಇಸ್ತ್ರಿ ಮಾಡಿಸಿ ಶುಭ್ರವಾಗಿ ನೀಡಲಾಗುತ್ತದೆ. ಫಲಾನುಭವಿ ವಧುವಿನ ಕುಟುಂಬಗಳಿಂದ ಒಂದು ಪೈಸೆಯನ್ನೂ ಪಡೆಯುವುದಿಲ್ಲ.

ನಸರ್ ವೃತ್ತಿಯಿಂದ ಟ್ಯಾಕ್ಸಿ ಚಾಲಕ. ಆರಂಭದಲ್ಲಿ ಮನೆಯಿಂದಲೇ ‘ಡ್ರೆಸ್ ಬ್ಯಾಂಕ್‌’ ಕಾರ್ಯಭಾರ ನಿಭಾಯಿಸುತ್ತಿದ್ದರು. ಕೆಲ ಕಾಲಾನಂತರ ಗೆಳೆಯರೊಬ್ಬರು ಈ ಉದ್ದೇಶಕ್ಕಾಗಿ ಒಂದು ಕೊಠಡಿ ಒದಗಿಸಿದರು. ಟ್ಯಾಕ್ಸಿ ಚಾಲಕ ವೃತ್ತಿಯ ಕಾರಣ ಸಾಮಾನ್ಯವಾಗಿ ಮಂಗಳವಾರ ಮತ್ತು ಭಾನುವಾರ ‘ಡ್ರೆಸ್‌ ಬ್ಯಾಂಕ್‌’ ಅನ್ನು ತೆರೆಯುತ್ತಾರೆ. ಇವರ ಈ ವಿನೂತನ ಸಮಾಜ ಸೇವೆಗೆ ಅವರ ಪತ್ನಿ ಮತ್ತು ಮಕ್ಕಳ ಒತ್ತಾಸೆ, ಬೆಂಬಲವೂ ಇದೆ.

ಆದರೆ, ಈ ಬ್ಯಾಂಕ್‌ನಲ್ಲಿ ವರನ ಉಡುಗೆಗಳು ಲಭ್ಯವಿಲ್ಲ. ‘ವರನ ಉಡುಗೆಗಾಗಿ ಹೆಚ್ಚಿನ ಬೇಡಿಕೆಯೇ ಬರುವುದಿಲ್ಲ. ಹೀಗಾಗಿ, ಅವುಗಳ ಸಂಗ್ರಹ ನನ್ನಲ್ಲಿಲ್ಲ’ ಎಂದು ನಸರ್‌ ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು