ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Farmers Protest | ರೈತರ ಹೋರಾಟಕ್ಕೆ ವರ್ಷದ ಸಂಭ್ರಮ

ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಲು ಒತ್ತಾಯ
Last Updated 26 ನವೆಂಬರ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಆರಂಭಿಸಿದ್ದ ಹೋರಾಟಕ್ಕೆ ಶುಕ್ರವಾರ ಒಂದು ವರ್ಷ ತುಂಬಿದೆ. ಹೋರಾಟಕ್ಕೆ ವರ್ಷ ತುಂಬಲು ನಾಲ್ಕೈದು ದಿನವಿದ್ದಾಗ, ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಕಾಯ್ದೆಗಳು ರದ್ದಾಗುವುದನ್ನು ಎದುರು ನೋಡುತ್ತಿರುವ ರೈತರು ತಮ್ಮ ಹೋರಾಟಕ್ಕೆ ವರ್ಷ ತುಂಬಿದ್ದನ್ನು ಸಂಭ್ರಮಿಸಿದ್ದಾರೆ.

ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ ಕಾಯ್ದೆಗಳನ್ನು ರದ್ದುಪಡಿಸುವ ಪ್ರಕ್ರಿಯೆ ಪೂರ್ಣವಾಗುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ರೈತ ಸಂಘಟನೆಗಳು ಹೇಳಿವೆ. ಹೀಗಾಗಿ ಇನ್ನೂ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಗಳಲ್ಲಿ ರೈತರು ಈ ದಿನವನ್ನು ಹಬ್ಬವನ್ನಾಗಿ ಆಚರಿಸಿದ್ದಾರೆ. ತಮ್ಮ ಟ್ರ್ಯಾಕ್ಟರ್‌ಗಳನ್ನು ಬಣ್ಣದ ಕಾಗದ ಮತ್ತು ಬಲೂನುಗಳಿಂದ ಅಲಂಕರಿಸಿದ್ದಾರೆ.

ಇದರ ಜತೆಯಲ್ಲಿಯೇ ರೈತರು ತಮ್ಮ ಇತರ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ‘ಕೃಷಿ ಕಾಯ್ದೆಗಳನ್ನು ರದ್ದುಮಾಡುವುದು ಮಾತ್ರವಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಮತ್ತೆ ಕಾನೂನಿನ ಅಡಿಯಲ್ಲಿ ತರಬೇಕು. ಪ್ರತಿಭಟನೆನಿರತ ರೈತರ ವಿರುದ್ಧ ದಾಖಲಿಸಿರುವ ಪ್ರತಿಭಟನೆಗಳನ್ನು ಕೈಬಿಡಬೇಕು. ವಿದ್ಯುತ್ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ರದ್ದುಪಡಿಸಬೇಕು’ ಎಂದು ಕಿಸಾನ್ ಸಂಯುಕ್ತ ಮೋರ್ಚಾ ಹೇಳಿದೆ.‘ನಮ್ಮ ಮುಂದಿನ ಹೋರಾಟದ ಸ್ವರೂಪವನ್ನು ಶನಿವಾರ ಸಭೆ ನಡೆಸಿ ನಿರ್ಧರಿಸಲಾಗುತ್ತದೆ. ಚಳಿಗಾಲದ ಅಧಿವೇಶನ ನಡೆಯುವಷ್ಟೂ ದಿನ ಸಂಸತ್ತಿಗೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತೇವೆ’ ಎಂದು ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ.

‘ನಮ್ಮ ಹೋರಾಟ ಇನ್ನೆಷ್ಟು ತಿಂಗಳು ಮುಂದುವರಿಯುತ್ತದೆಯೋ ಎಂಬುದು ಗೊತ್ತಿಲ್ಲ. ಹೀಗಾಗಿ ನಾಲ್ಕೈದು ತಿಂಗಳಿಗಾಗುವಷ್ಟು ದಿನಸಿ ಮತ್ತು ಅಗತ್ಯ ವಸ್ತುಗಳನ್ನು ತಂದಿದ್ದೇವೆ’ ಎಂದು ರೈತರು ಹೇಳಿದ್ದಾರೆ.

ಹೊಸ ಹುರುಪಿನೊಂದಿಗೆ ಮುಂದುವರಿದ ಅನ್ನದಾತರ ಪ್ರತಿಭಟನೆ

ಗಾಜಿಪುರ ಗಡಿಯಲ್ಲಿ ನಡೆದ ಸಂಭ್ರಮಾಚರಣೆ ಸಭೆಯಲ್ಲಿ 50,000ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದರು ಎಂದು ಬಿಕೆಯು ಹೇಳಿದೆ

ಹೋರಾಟದಲ್ಲಿ ಬಲಿದಾನ

*ಪ್ರತಿಭಟನೆ ವೇಳೆ ಮೃತರಾದ ರೈತರ ಸಂಖ್ಯೆ: 700

*ಲಖಿಂಪುರ ಖೇರಿಯಲ್ಲಿ ಜೀಪಿಗೆ ಸಿಲುಕಿ ಸತ್ತ ರೈತರ ಸಂಖ್ಯೆ: 8

*ಹೋರಾಟದ ವೇಳೆ ಹುತಾತ್ಮರಾದ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ

ಶೌರ್ಯದ ಕತೆ
‘ರೈತರ ಶೌರ್ಯ, ತಾಳ್ಮೆ ಮತ್ತು ದೃಢಸಂಕಲ್ಪದ ಈ ಅಹಿಂಸಾ ಹೋರಾಟವು ಕಠೋರವಾದ ಕಾನೂನುಗಳನ್ನು ತೆಗೆದುಹಾಕಿದ್ದು ಮಾತ್ರವಲ್ಲ, ಬದಲಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಿತು’ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

‘ಬೇಡಿಕೆ ನ್ಯಾಯಯುತ’
‘ಈ ಹೋರಾಟದಲ್ಲಿ ರೈತರಿಗೆ ಸಂದ ಜಯವು, ಪ್ರಜಾಪ್ರಭುತ್ವಕ್ಕೆ ಸಂದ ಜಯವೇ ಸರಿ. ನಾವು ರೈತರೊಂದಿಗೆ ಸದಾ ಇರುತ್ತೇವೆ. ರೈತರ ಆ ಎಲ್ಲಾ ಬೇಡಿಕೆಗಳನ್ನು ನಾವು ಬೆಂಬಲಿಸುತ್ತೇವೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.

ಬಿಜೆಪಿಯ ಕ್ರೌರ್ಯ
‘ರೈತರ ಚಳವಳಿಗೆ ಒಂದು ವರ್ಷ ಸಂದಿದೆ. ರೈತರ ಅಚಲ ಸತ್ಯಾಗ್ರಹ, 700 ರೈತರ ಬಲಿದಾನ, ಅನ್ನದಾತರ ಮೇಲೆ ದೌರ್ಜನ್ಯ ನಡೆಸಿದ ಬಿಜೆಪಿ ಸರ್ಕಾರದ ದುರಹಂಕಾರ ಮತ್ತು ಕ್ರೌರ್ಯವೆಂದು ಇದು ದಾಖಲಾಗುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT