ಶುಕ್ರವಾರ, ಮೇ 20, 2022
19 °C
ಕೆ.ಜಿ.ಗೆ ₹80 ದಾಟಿದ ಬೆಲೆ: ದರ ಏರಿಕೆ ತಡೆಗೆ ಕೇಂದ್ರ ಸರ್ಕಾರದ ಕ್ರಮ

ಈರುಳ್ಳಿ ಸಂಗ್ರಹಕ್ಕೆ ಮಿತಿ ಹೇರಿ ಕೇಂದ್ರ ಸರ್ಕಾರ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಗತ್ಯ ವಸ್ತುಗಳ ಕಾಯ್ದೆಗೆ ಕೆಲವೇ ದಿನಗಳ ಹಿಂದೆ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ಅಗತ್ಯ ವಸ್ತುಗಳ ಪಟ್ಟಿಯಿಂದ ಈರುಳ್ಳಿಯನ್ನು ಕೈಬಿಟ್ಟಿತ್ತು. ಆದರೆ, ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಈರುಳ್ಳಿ ಸಂಗ್ರಹದ ಮೇಲೆ ಮಿತಿ ಹೇರಿ ಶುಕ್ರವಾರ ಆದೇಶ ಹೊರಡಿಸಿದೆ.

ಸಂಗ್ರಹದ ಮಿತಿಯನ್ನು ಸಗಟು ಮಾರಾಟಗಾರರಿಗೆ 250 ಕ್ವಿಂಟಲ್‌ ಮತ್ತು ಚಿಲ್ಲರೆ ಮಾರಾಟಗಾರರಿಗೆ 20 ಕ್ವಿಂಟಲ್‌ಗೆ ನಿಗದಿ ಮಾಡಲಾಗಿದೆ. ದೇಶದ ವಿವಿಧ ನಗರಗಳಲ್ಲಿ ಈರುಳ್ಳಿ ಬೆಲೆಯು ಕೆ.ಜಿ.ಗೆ ₹80ಕ್ಕೂ ಹೆಚ್ಚಾಗಿರುವುದರಿಂದ, ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆ ಹೆಚ್ಚಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಈರುಳ್ಳಿಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಟ್ಟಿದ್ದರಿಂದಾಗಿ ಯುದ್ಧ ಅಥವಾ ಬರಗಾಲದಂತಹ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ
ಈರುಳ್ಳಿಯ ಮೇಲೆ ನಿರ್ಬಂಧ ಹೇರುವ ಅವಕಾಶ ಕೇಂದ್ರಕ್ಕೆ ಲಭಿಸುತ್ತದೆ. ಹಾಗಿದ್ದರೂ, ಅಗತ್ಯ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಈರುಳ್ಳಿ ಸಂಗ್ರಹಕ್ಕೆ ಮಿತಿ ಹೇರಿ ಆದೇಶ ಹೊರಡಿಸಿದೆ.

‘ಈರುಳ್ಳಿ ಬೆಲೆ ಏರಿಕೆ ತಡೆಯಲು ಮತ್ತು ಸಂಗ್ರಹವನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತಕ್ಷಣ ಕ್ರಮ ಕೈಗೊಂಡಿದೆ’ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ. 

ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಅಕಾಲಿಕ ಭಾರಿ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವು ಬೆಲೆ ಏರಿಕೆಗೆ ಕಾರಣವಾಗಿದೆ. ಈ ಬಾರಿಯ ಈರುಳ್ಳಿ ಉತ್ಪಾದನೆಯು 43 ಲಕ್ಷಟನ್‌ಗಳಷ್ಟಾಗಬಹುದು ಎಂದು ಮೊದಲಿಗೆ ಅಂದಾಜಿಸಲಾಗಿತ್ತು. ಅದನ್ನು 36 ಲಕ್ಷ ಟನ್‌ಗೆ ಈಗ ಪರಿಷ್ಕರಿಸಲಾಗಿದೆ. 

ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಈರುಳ್ಳಿ ಉತ್ಪಾದಕ ದೇಶಗಳಿಂದ ಆಮದಿಗೆ ಇದ್ದ ನಿಯಮಗಳನ್ನು ಕೇಂದ್ರವು ಇತ್ತೀಚೆಗೆ ಸಡಿಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು