ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳ ಕುರಿತ ಜಾಹೀರಾತು ಪ್ರಕಟಿಸದಂತೆ ಕೇಂದ್ರ ಸೂಚನೆ

ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಗಳಿಗೆ ಸಲಹೆ* ಆನ್‌ಲೈನ್ ಜಾಹೀರಾತು ಮಧ್ಯವರ್ತಿಗಳು, ಪ್ರಕಾಶಕರ ಮೇಲೆ ಹೆಚ್ಚಿನ ನಿಯಂತ್ರಣದ ಗುರಿ
Last Updated 13 ಜೂನ್ 2022, 13:10 IST
ಅಕ್ಷರ ಗಾತ್ರ

ನವದೆಹಲಿ:ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳ ಕುರಿತು ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದನ್ನು ‘ತಡೆಯಲು’ ಕೇಂದ್ರ ಸರ್ಕಾರ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಸೋಮವಾರ ಹೊಸ ಸಲಹೆ– ಸೂಚನೆಗಳನ್ನು ನೀಡಿದೆ.

ಈ ವೇದಿಕೆಗಳು ಯುವ ಸಮುದಾಯ ಮತ್ತು ಮಕ್ಕಳನ್ನು ಒಳಗೊಂಡಿರುವ ಗ್ರಾಹಕರಿಗೆ ‘ಗಮನಾರ್ಹ’ವಾಗಿ ಹಣಕಾಸಿನ ಮತ್ತು ಸಾಮಾಜಿಕ– ಆರ್ಥಿಕ ಅಪಾಯವನ್ನು ಉಂಟು ಮಾಡುತ್ತವೆ ಎಂದು ಸರ್ಕಾರ ಉಲ್ಲೇಖಿಸಿದೆ.

2020ರ ಡಿಸೆಂಬರ್ 12ರಂದು ಟಿ.ವಿ ಚಾನೆಲ್‌ಗಳಿಗೆ ಆನ್‌ಲೈನ್ ಗೇಮಿಂಗ್ ಕುರಿತು ಮಾರ್ಗಸೂಚಿ ಹೊರಬಿದ್ದಿತ್ತು. ಇದೀಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯಹೊಸ ಸಲಹೆಗಳನ್ನು ನೀಡಿದ್ದು, ಭಾರತದ ಜಾಹೀರಾತು ಮಾನದಂಡಗಳ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ.

ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳು ಅಥವಾ ಪ್ಲಾಟ್‌ಫಾರ್ಮ್‌ಗಳ ಹಲವು ಜಾಹೀರಾತುಗಳು ಮುದ್ರಣ, ಎಲೆಕ್ಟ್ರಾನಿಕ್, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಸಚಿವಾಲಯವು ಆನ್‌ಲೈನ್ ಬೆಟ್ಟಿಂಗ್ ಕುರಿತು ಅಗತ್ಯ ಸಲಹೆಗಳನ್ನು ನೀಡಿದೆ.

‘ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸಲಹೆಗಳನ್ನು ನೀಡಲಾಗಿದೆ.ಆನ್‌ಲೈನ್ ಜಾಹೀರಾತು ಮಧ್ಯವರ್ತಿಗಳು ಮತ್ತು ಪ್ರಕಾಶಕರು ಭಾರತದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಕುರಿತ ಜಾಹೀರಾತುಗಳನ್ನು ಆನ್‌ಲೈನ್ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಪ್ರದರ್ಶಿಸದಂತೆ ಅಥವಾ ಅಂತಹ ಜಾಹೀರಾತುಗಳಿಗೆ ಭಾರತೀಯ ಪ್ರೇಕ್ಷಕರನ್ನು ಗುರಿಪಡಿಸದಂತೆ ಎಚ್ಚರವಹಿಸಬೇಕು’ ಎಂದು ಸಚಿವಾಲಯ ಸೂಚಿಸಿದೆ.

‘ದೇಶದ ಹೆಚ್ಚಿನ ಭಾಗಗಳಲ್ಲಿ ಬೆಟ್ಟಿಂಗ್ ಮತ್ತು ಜೂಜಾಟ ಕಾನೂನುಬಾಹಿರವಾಗಿದೆ. ಆನ್‌ಲೈನ್ ಬೆಟ್ಟಿಂಗ್‌ನ ಜಾಹೀರಾತುಗಳು ಈ ಚಟುವಟಿಕೆಯನ್ನು ಉತ್ತೇಜಿಸುತ್ತದೆ’ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

‘ಆನ್‌ಲೈನ್ ಬೆಟ್ಟಿಂಗ್‌ನ ಜಾಹೀರಾತುಗಳು ಜನರನ್ನು ತಪ್ಪುದಾರಿಗೆಳೆಯುವಂತಿವೆ. ಇವು ಗ್ರಾಹಕರ ಸಂರಕ್ಷಣಾ ಕಾಯ್ದೆ 2019, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ ನಿಯಂತ್ರಣ ಕಾಯ್ದೆ 1995 ಮತ್ತು ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾದಜಾಹೀರಾತು ಕೋಡ್ ಮತ್ತು ಪತ್ರಿಕೋದ್ಯಮದ ನಡವಳಿಕೆ ನಿಯಮಗಳ ಅಡಿಯ ಜಾಹೀರಾತು ಮಾನದಂಡಗಳಿಗೆ ಅನುಗುಣವಾಗಿಲ್ಲ’ ಎಂದಿರುವ ಸರ್ಕಾರ,‘ಐ.ಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) 2021 ನಿಯಮಗಳನ್ನು ಪಾಲಿಸಬೇಕು’ ಎಂಬ ಉಲ್ಲೇಖವನ್ನು ಮಾಡಿದೆ.

ಭಾರತದ ಜಾಹೀರಾತು ಮಾನದಂಡಗಳ ಮಂಡಳಿ ಹೊರಡಿಸಿರುವ ಆನ್‌ಲೈನ್ ಗೇಮಿಂಗ್‌ನ ಮಾರ್ಗಸೂಚಿಗಳು ಕಳೆದ ವರ್ಷದ ಡಿಸೆಂಬರ್‌ 15ರಿಂದ ಜಾರಿಗೆ ಬಂದಿವೆ. ಅದರ ಪ್ರಕಾರ,ಯಾವುದೇ ಗೇಮಿಂಗ್ ಜಾಹೀರಾತುಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಬಿಂಬಿಸುವಂತಿಲ್ಲ. ಹಣಕ್ಕಾಗಿ ಆನ್‌ಲೈನ್‌ ಆಟ ಆಡುವಂತೆ 18 ವರ್ಷದೊಳಗಿನವರನ್ನು ಉತ್ತೇಜಿಸುವಂತಿಲ್ಲ ಎಂದು ತಿಳಿಸಿದೆ.

ಈ ಗೇಮಿಂಗ್‌ನಲ್ಲಿ ಒಳಗೊಂಡಿರುವ ಹಣಕಾಸಿನ ಅಪಾಯಗಳ ಬಗ್ಗೆ ಮುದ್ರಣ ಮತ್ತು ಆಡಿಯೊ– ವಿಡಿಯೊ ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಎಂದೂ ಮಂಡಳಿ ಹೇಳಿದೆ.

ಆನ್‌ಲೈನ್ ಗೇಮಿಂಗ್‌ನಲ್ಲಿನ ಆದಾಯದ ಅವಕಾಶಗಳನ್ನು ಅಥವಾ ಅದನ್ನು ಪರ್ಯಾಯ ಉದ್ಯೋಗದ ಆಯ್ಕೆಯಾಗಿ ಪ್ರಸ್ತುತಪಡಿಸಬಾರದು.ಅಲ್ಲದೆ ಈ ಗೇಮಿಂಗ್ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯು ಇತರರಿಗಿಂತ ಹೆಚ್ಚು ಯಶಸ್ವಿಯಾಗಿದ್ದಾನೆ ಎಂಬುದನ್ನೂ ಸೂಚಿಸಬಾರದು ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT