ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯ ವೈಯಕ್ತಿಕ ಪ್ರಚಾರಕ್ಕಾಗಿ ಕೋವಿಡ್ ಲಸಿಕೆಯ ಬಳಕೆ: ಪ್ರಿಯಾಂಕಾ ಗಾಂಧಿ

Last Updated 26 ಮೇ 2021, 11:36 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದಲ್ಲಿ ಕೋವಿಡ್‌ ಲಸಿಕೆಯನ್ನು ಜನರ ಜೀವ ಉಳಿಸುವ ಸಾಧನವನ್ನಾಗಿ ಬಳಸುವ ಬದಲು ಪ್ರಧಾನಿ ಮೋದಿ ಅವರ ‘ವೈಯಕ್ತಿಕ ಪ್ರಚಾರ’ಕ್ಕಾಗಿ ಬಳಸಲಾಗುತ್ತಿದೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೂರಿದ್ದಾರೆ.

‘ಜಿಮೆದಾರ್‌ ಕೌನ್‌?’(ಯಾರು ಜವಾಬ್ದಾರರು?) ಅಭಿಯಾನದಡಿ ಮಾತನಾಡಿದ ಪ್ರಿಯಾಂಕಾ ಗಾಂಧಿ,‘ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ದೇಶ ಭಾರತವು, ಈಗ ಲಸಿಕೆಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರವು ಇದನ್ನು ದೊಡ್ಡ ಸಾಧನೆ ಎಂಬ ರೀತಿಯಲ್ಲಿ ತೋರಿಸಲು ಪ್ರಯತ್ನಿಸುತ್ತಿದೆ’ ಎಂದು ಟೀಕಿಸಿದ್ದಾರೆ.

‘ಕೇಂದ್ರ ಸರ್ಕಾರವು ಲಸಿಕೆ ಅಭಿಯಾನದ ಸಂಪೂರ್ಣ ಹೊಣೆಯನ್ನು ರಾಜ್ಯಗಳ ಮೇಲೆ ಹೇರಿದೆ. ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೊವೊಂದನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಜವಾಬ್ದಾರಿಯು ರಾಜ್ಯಗಳ ಮೇಲಿದೆ. ರಾಜ್ಯಗಳಲ್ಲಿ ಲಸಿಕೆಯ ಅಭಾವವಿದೆ. ಈ ಪರಿಸ್ಥಿತಿಗೆ ಯಾರು ಹೊಣೆ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸರ್ಕಾರವು ಲಸಿಕೆ ಅಭಿಯಾನಕ್ಕೆ ಸಂಪೂರ್ಣ ಯೋಜನೆಯನ್ನು ತಯಾರಿಸಿದೆ ಎಂದು ಕಳೆದ ವರ್ಷ ಆಗಸ್ಟ್‌ 15ರಂದು ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ಹೇಳಿದ್ದರು. ಭಾರತದ ಲಸಿಕೆ ಉತ್ಪಾದನೆಯ ಇತಿಹಾಸವನ್ನು ಗಮನಿಸಿ, ನಾನು ಕೂಡ ಕೇಂದ್ರ ಸರ್ಕಾರ ಲಸಿಕೆ ಅಭಿಯಾನವನ್ನು ಸರಿಯಾದ ರೀತಿಯಲ್ಲಿ ಮಾಡಬಹುದು ಎಂದು ಭಾವಿಸಿದ್ದೆ’ ಎಂದು ಅವರು ತಿಳಿಸಿದರು.

‘ಪಂಡಿತ್‌ ಜವಾಹರಲಾಲ್ ನೆಹರೂ ಅವರು1948ರಲ್ಲಿ ಚೆನ್ನೈನಲ್ಲಿ ಲಸಿಕೆ ಘಟಕ ಮತ್ತು 1952ರಲ್ಲಿ ಪುಣೆಯಲ್ಲಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಯನ್ನು ಸ್ಥಾಪಿಸಿದರು. ಈ ಹಿಂದೆಯೂ ಭಾರತ ಸಿಡುಬು(ಸ್ಮಾಲ್‌ಪಾಕ್ಸ್‌),ಪೋಲಿಯೊದಂತಹ ರೋಗಗಳ ಸವಾಲನ್ನು ಎದುರಿಸಿದೆ’ ಎಂದು ಅವರು ಹೇಳಿದರು.

‘ಭಾರತದ 130 ಕೋಟಿ ಜನಸಂಖ್ಯೆ ಪೈಕಿ ಶೇಕಡ 11ರಷ್ಟು ಜನರು ಮಾತ್ರ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಶೇಕಡ 3ರಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಲಸಿಕೆ ಪ್ರಮಾಣವು ಶೇಕಡ 83ರಷ್ಟು ಕಡಿಮೆಯಾಗಿದೆ’ ಎಂದು ಅವರು ದೂರಿದ್ದಾರೆ.

‘ಕಳೆದ ವರ್ಷ ಹಲವು ರಾಷ್ಟ್ರಗಳು ಲಸಿಕೆಗಳನ್ನು ಖರೀಸಿದ್ದವು. ಆದರೆ ಮೋದಿ ಸರ್ಕಾರವು ಜನವರಿ 2021ರಲ್ಲಿ ಲಸಿಕೆಯ ಮೊದಲ ಖರೀದಿಯನ್ನು ಮಾಡಿತ್ತು. ಅದು ಕೂಡ ಕೇವಲ 1.6 ಕೋಟಿ ಡೋಸ್‌ಗಳು. ಈ ವರ್ಷ ಜನವರಿ–ಮಾರ್ಚ್‌ ತಿಂಗಳಲ್ಲಿ ಮೋದಿ ಸರ್ಕಾರವು 6.5 ಕೋಟಿ ಡೋಸ್‌ಗಳನ್ನು ವಿದೇಶಗಳಿಗೆ ರವಾನೆ ಮಾಡಿದೆ. ಅದರಲ್ಲೂ ಕೆಲವರಿಗೆ ಉಚಿತವಾಗಿ ನೀಡಿದೆ. ಆಗ ಭಾರತದಲ್ಲಿ ಕೇವಲ 3.5 ಕೋಟಿ ಜನರು ಮಾತ್ರ ಲಸಿಕೆಯನ್ನು ಪಡೆದಿದ್ದರು. ಭಾರತದಲ್ಲಿ ಕಡಿಮೆ ಜನರಿಗೆ ಲಸಿಕೆಯನ್ನು ನೀಡಿ, ವಿದೇಶಗಳಿಗೆ ಯಾಕೆ ಲಸಿಕೆಯನ್ನು ಕಳುಹಿಸಬೇಕಾಗಿತ್ತು?’ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT