ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ, ಅಡುಗೆ ಅನಿಲ ಬೆಲೆ ಇಳಿಕೆಗೆ ಪ್ರತಿಪಕ್ಷಗಳ ಒತ್ತಾಯ

ರಷ್ಯಾ– ಉಕ್ರೇನ್ ಯುದ್ಧದಿಂದಾಗಿ ಬೆಲೆ ಏರಿಕೆ: ಅಲ್ಲಗಳೆದ ವಿಪಕ್ಷ ಸದಸ್ಯರು
Last Updated 28 ಮಾರ್ಚ್ 2022, 14:32 IST
ಅಕ್ಷರ ಗಾತ್ರ

ನವದೆಹಲಿ: ಇಂಧನ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಸೋಮವಾರ ಒತ್ತಾಯಿಸಿರುವ ಪ್ರತಿಪಕ್ಷಗಳು, ಈ ವಿಷಯದ ಕುರಿತು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿವೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಾರಣದಿಂದಾಗಿ ಇಂಧನ ಬೆಲೆ ಏರಿಕೆಯಾಗಿದೆ ಎಂಬ ಆಡಳಿತಾರೂಢ ಸರ್ಕಾರದ ವಾದವನ್ನು ಪ್ರತಿಪಕ್ಷಗಳ ಸದಸ್ಯರು ತಳ್ಳಿಹಾಕಿದರು.

ಲೋಕಸಭೆಯ ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್‌ ಸಂಸದ ಅಧೀರ್ ರಂಜನ್ ಚೌಧರಿ ಅವರು, ‘ಇಂಧನ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಜೇಬಿಗೆ ಹೊರೆಯಾಗುತ್ತಿದ್ದು, ಸಂಕಷ್ಟಕ್ಕೀಡಾಗಿದ್ದಾರೆ’ ಎಂದರು.

ದೇಶದಲ್ಲಿ ನಿರಂತರವಾಗಿ ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಪಿಎನ್‌ಜಿ ಬೆಲೆಗಳು ಏರಿಕೆಯಾಗುತ್ತಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ‘ಬೆಲೆ ಏರಿಕೆ ಮುಕ್ತ ಭಾರತ’ ಅಭಿಯಾನ (ಮೆಹಂಗಾಯಿ ಮುಕ್ತ್ ಭಾರತ್ ಅಭಿಯಾನ್) ಮಾಡಲು ನಿರ್ಧರಿಸಿದ್ದಾರೆ. ಇಂಧನ, ಅಡುಗೆ ಅನಿಲ ಬೆಲೆ ಏರಿಕೆಯಷ್ಟೇ ಅಲ್ಲ, ಏಪ್ರಿಲ್ ತಿಂಗಳಿಂದ 800 ಅತ್ಯಾವಶ್ಯಕ ಔಷಧಿಗಳ ಬೆಲೆಯನ್ನೂ ಏರಿಸಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರಷ್ಯಾ– ಉಕ್ರೇನ್ ನಡುವಿನ ಯುದ್ಧದಿಂದಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂದು ಸರ್ಕಾರ ಸಮರ್ಥಿಸಿ ಕೊಳ್ಳುತ್ತಿದೆ. ಆದರೆ, ನಾವು ರಷ್ಯಾದಿಂದ ಶೇ 0.5ರಷ್ಟು ಮಾತ್ರ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. 8 ವರ್ಷಗಳಿಂದ ನಿರಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯಿಂದಾಗಿ ಸರ್ಕಾರವು ₹ 26 ಲಕ್ಷ ಕೋಟಿ ಅಬಕಾರಿ ಸುಂಕವನ್ನು ಗಳಿಸಿದೆ’ ಎಂದು ಮಾಹಿತಿ ನೀಡಿದರು.

‘ನಾವು ಒಳ್ಳೆಯ ದಿನಗಳನ್ನು (ಅಚ್ಛೇ ದಿನ್) ತಂದಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ, ಜನಸಾಮಾನ್ಯರಿಗೆ ಇದಕ್ಕಿಂತ ಹೆಚ್ಚಿನ ಕೆಟ್ಟ ದಿನಗಳು (ಬೂರೇ ದಿನ್) ಇರಲಾರವು. ತಕ್ಷಣವೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಮತ್ತು ಈ ವಿಷಯದ ಬಗ್ಗೆ ಈ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸುತ್ತೇವೆ’ ಚೌಧರಿ ಹೇಳಿದರು.

ಡಿಎಂಕೆ ಸದಸ್ಯ ಟಿ.ಆರ್. ಬಾಲು ಮಾತನಾಡಿ, ತೈಲ ಬೆಲೆ ಏರಿಕೆ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಾರಂಭದಲ್ಲಿಯೇ ಪೆಟ್ರೋಲ್ ಮೇಲೆ ಲೀಟರ್‌ಗೆ ₹ 3 ಕಡಿಮೆ ಮಾಡಿದ್ದಾರೆ. ಆದರೆ, ಕಳೆದ ಒಂದು ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ₹ 4 ಏರಿಕೆಯಾಗಿದ್ದು ಹೇಗೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು,

‘ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಶೇ 50ರಷ್ಟು ಇಳಿಕೆ ಮಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಈಗ ಸುಮ್ಮನಿರುವುದು ಏಕೆ’ ಎಂದೂ ಅವರು ಪ್ರಶ್ನಿಸಿದರು.

ಟಿಎಂಸಿ ಸದಸ್ಯ ಸುದೀಪ್ ಬಂಡೋಪಾಧ್ಯಾಯ ಮಾತನಾಡಿ, ‘ಬೆಲೆ ಏರಿಕೆ ವಿಷಯವನ್ನು ಸದನದಲ್ಲಿ ಚರ್ಚಿಸಬೇಕು ಮತ್ತು ಇದು ಯಾವಾಗ ನಿಲ್ಲುತ್ತದೆ ಎಂಬುದನ್ನು ನಾವು ಪ್ರಧಾನಿಯಿಂದ ಕೇಳಲು ಬಯಸುತ್ತೇವೆ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT