ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಹೆದರುವುದೇಕೆ? ವಿರೋಧ ಪಕ್ಷಗಳ ತೀಕ್ಷ್ಣ ಪ್ರಶ್ನೆ

ಅದಾನಿ ಪ್ರಕರಣ: ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷಗಳ ತೀಕ್ಷ್ಣ ಪ್ರಶ್ನೆ, ನಡೆಯದ ಸಂಸತ್‌ ಕಲಾಪ
Last Updated 27 ಮಾರ್ಚ್ 2023, 17:51 IST
ಅಕ್ಷರ ಗಾತ್ರ

ನವದೆಹಲಿ: ‘ಅದಾನಿ ಸಮೂಹದ ಮೇಲಿನ ಆರೋಪದ ತನಿಖೆಗೆ ಸರ್ಕಾರ ಆದೇಶ ನೀಡದಿರುವುದು ಏಕೆ’ ಎಂದು ವಿರೋಧ ಪಕ್ಷಗಳ ನಾಯಕರು ಸರ್ಕಾರವನ್ನು ಪ್ರಶ್ನಿಸಿದವು. ಸಂಸತ್ತಿನ ಒಳಗೆ ಮತ್ತು ಹೊರಗೆ ನಡೆದ ಪ್ರತಿಭಟನೆಯಲ್ಲಿ ವಿರೋಧ ಪಕ್ಷಗಳ ನಾಯಕರು ಈ ಪ್ರಶ್ನೆಯನ್ನು ಪದೇ ಪದೇ ಸರ್ಕಾರದ ಮುಂದಿಟ್ಟರು.

ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು, ‘ಇ.ಡಿ ಮತ್ತು ಮೊದಾನಿ ಅಣ್ಣ–ತಮ್ಮ’, ‘ಇ.ಡಿ ಮತ್‌ ಡರೋ, ಅದಾನಿ ಪರ್‌ ರೇಡ್‌ ಕರೋ (ಹೆದರಬೇಡ ಇ.ಡಿ, ಅದಾನಿ ಮೇಲೆ ದಾಳಿ ಮಾಡು)’ ಎಂಬ ಘೋಷಣೆಗಳಿದ್ದ ಫಲಕಗಳನ್ನು ಪ್ರದರ್ಶಿಸಿದರು.

ಕರಾಳ ದಿನದ ಭಾಗವಾಗಿ ಎಲ್ಲಾ ವಿರೋಧ ಪಕ್ಷಗಳ ಸಂಸದರು ಕಪ್ಪು ದಿರಿಸು ಧರಿಸಿದ್ದರು. ‘ಪ್ರಧಾನಿ ಮೋದಿ ಅವರು ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲಾ ವಿರೋಧ ಪಕ್ಷಗಳ ನಾಯಕರು ಕಪ್ಪು ಬಟ್ಟೆ ಹಾಕಿದ್ದಾರೆ. ಕೆಲವೇ ವರ್ಷಗಳಲ್ಲಿ ಅದಾನಿಯ ಆಸ್ತಿ ಹಲವು ಪಟ್ಟು ಹೆಚ್ಚಾಗಿದ್ದು ಹೇಗೆ? ಅದಾನಿ ಸಂಬಂಧ ಎತ್ತಲಾದ ಪ್ರಶ್ನೆಗಳಿಗೆ ಪ್ರಧಾನಿ ಉತ್ತರ ನೀಡುತ್ತಿಲ್ಲ. ಹೀಗಾಗಿಯೇ ಈ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಬೇಕು ಎಂದು ನಾವು ಕೇಳುತ್ತಿದ್ದೇವೆ. ಆದರೆ, ಸರ್ಕಾರ ಇದಕ್ಕೆ ಒಪ್ಪದೇ ಇರುವುದು ಏಕೆ? ಜೆಪಿಸಿ ತನಿಖೆಗೆ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಇಲ್ಲೇನೋ ತಪ್ಪು ನಡೆದಿದೆ ಎಂಬುದುನ್ನು ಇದು ಸೂಚಿಸುತ್ತದೆ ಅಲ್ಲವೇ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು

ಸಚಿವ ಪುರಿ ವಿರುದ್ಧ ಕಾಂಗ್ರೆಸ್ ಕಿಡಿ

ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಸಾವರ್ಕರ್ ಅವರಂತವರು ದೇಶಕ್ಕೆ ನೀಡಿದ ಕೊಡುಗೆ ಗೊತ್ತಿದೆಯೇ ಎಂದು ರಾಹುಲ್ ಅವರನ್ನು ಉದ್ದೇಶಿಸಿ ಪುರಿ ಹೇಳಿದರು. ‘ಕುದುರೆ ಓಟದ ಸ್ಪರ್ಧೆಯಲ್ಲಿ ಕತ್ತೆಯನ್ನು ತರುತ್ತಿದ್ದೀರಾ’ ಎಂದು ಪುರಿ ಹೇಳಿದರು. ಈ ಮಾತಿಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಾತನಾಡಿದವರ ನಾಲಗೆಯು ಅವರ ಚಾರಿತ್ರ್ಯವನ್ನು ಹೇಳುತ್ತದೆ ಎಂದು ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್ ಹಾಗೂ ಸುಪ್ರಿಯಾ ಶ್ರೀನಾಥೆ ಅವರು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT