ಶನಿವಾರ, ಜೂನ್ 25, 2022
26 °C

ಕೇರಳ: ಇಂಧನ ಮೇಲಿನ ಹೆಚ್ಚುವರಿ ತೆರಿಗೆ ಕೈಬಿಡಲು ವಿರೋಧ ಪಕ್ಷಗಳ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆಯನ್ನು ಕೈಬಿಡುವಂತೆ ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಯುಡಿಎಫ್‌ ನೇತೃತ್ವದ ವಿರೋಧ ಪಕ್ಷಗಳು ಬುಧವಾರ ಸಭಾತ್ಯಾಗ ಮಾಡಿದವು.

ಈಗಾಗಲೇ ಇಂಧನ ದರಗಳು ಹೊಸ ಎತ್ತರಕ್ಕೆ ಏರಿಕೆಯಾಗಿವೆ. ಹೀಗಾಗಿ ಇಂಧನ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆ ಮೂಲಕ ಬಂದಿರುವ ಆದಾಯವನ್ನು ಬಿಟ್ಟುಕೊಡಬೇಕು ಎಂದು ವಿರೋಧ ಪಕ್ಷಗಳ ಪಟ್ಟು ಹಿಡಿದವು.

ವಿರೋಧ ಪಕ್ಷಗಳ ಈ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಸರ್ಕಾರ, ‘ಈಗಾಗಲೇ ರಾಜ್ಯ ಹಣಕಾಸು ಬಿಕ್ಕಟ್ಟಿನಿಂದ ತತ್ತರಿಸಿದೆ. ಇಂಥ ಕ್ರಮದಿಂದ ರಾಜ್ಯದ ಆರ್ಥಿಕತೆ ಮತ್ತಷ್ಟು ಸಂಕಷ್ಟಕ್ಕೀಡಾಗುವುದು’ ಎಂದು ಹೇಳಿತು.

‘ಈ ಹಿಂದೆ ಉಮ್ಮೆನ್‌ ಚಾಂಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕನಿಷ್ಠ 7 ಬಾರಿ ಪೆಟ್ರೋಲ್‌ ಮೇಲಿನ ಹೆಚ್ಚುವರಿ ತೆರಿಗೆಯನ್ನು ಮನ್ನಾ ಮಾಡಿದ್ದರು. ಇಂಧನ ದರಗಳು ಹೆಚ್ಚುತ್ತಿದ್ದರೂ, ಸಾಮಾನ್ಯ ಜನರ ಮೇಲೆ ಹೊರೆ ಬೀಳದಂತೆ ನೋಡಿಕೊಂಡಿದ್ದರು’ ಎಂದು ಯುಡಿಎಫ್‌ ಶಾಸಕರು ಹೇಳಿದರು.

‘ಕೇಂದ್ರದಲ್ಲಿರುವ ಬಿಜೆ‍ಪಿ ನೇತೃತ್ವದ ಎನ್‌ಡಿಎ, ರಾಜ್ಯದಲ್ಲಿನ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರಗಳು ಇಂಧನ ದರಗಳಲ್ಲಿನ ಹೆಚ್ಚಳವನ್ನು ಜನರನ್ನು ಲೂಟಿ ಮಾಡಲು ಬಳಸುತ್ತಿವೆ’ ಎಂದೂ ವಿರೋಧ ಪಕ್ಷಗಳ ಶಾಸಕರು ಟೀಕಿಸಿದರು.

ನಂತರ, ಶೂನ್ಯ ವೇಳೆಯಲ್ಲಿ ಈ ಕುರಿತು ಚರ್ಚೆಗೆ ಅವಕಾಶ ಸಿಗದಿದ್ದಾಗ, ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಶಾಸಕರು ಸದನದಿಂದ ಹೊರ ನಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು