ಶುಕ್ರವಾರ, ಮಾರ್ಚ್ 31, 2023
23 °C

ಹಿಂದಿ ಭಾಷೆ ಹೇರಿಕೆಗೆ ವಿರೋಧ ಮುಂದುವರಿಯುತ್ತದೆ: ಸ್ಟಾಲಿನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವಳ್ಳೂರು: ಜನ ಅಥವಾ ರಾಜ್ಯದ ಮೇಲೆ ಹಿಂದಿ ಹೇರಿಕೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂಚೂಣಿಯಲ್ಲಿ ನಿಂತಿದೆ. ಆದರೆ ಆಡಳಿತಾರೂಢ ಡಿಎಂಕೆ ಇದಕ್ಕೆ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ರಾಜ್ಯದಲ್ಲಿ ನಡೆದ ಹಿಂದಿ ಭಾಷೆ ವಿರೋಧ ಆಂದೋಲನ ಭಾಗವಾಗಿ ಮಡಿದವರಿಗೆ ಗೌರವಸಲ್ಲಿಸಲು ಬುಧವಾರ ನಡೆದ ಭಾಷಾ ಹುತಾತ್ಮತ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಿಂದಿ ಹೇರುವುದನ್ನು ಅಭ್ಯಾಸ ಮಾಡಿಕೊಂಡಿದೆ. ಆಡಳಿತದಿಂದ ಶಿಕ್ಷಣದವರೆಗೆ ಹಿಂದಿ ಹೇರುವುದಕ್ಕೇ ಆಡಳಿತಕ್ಕೆ ಬಂದಂತೆ ಭಾವಿಸುತ್ತಿದ್ದಾರೆ. ಒಂದು ರಾಷ್ಟ್ರ, ಒಂದು ಧರ್ಮ, ಒಂದು ಚುನಾವಣೆ, ಒಂದು (ಪ್ರವೇಶ) ಪರೀಕ್ಷೆ, ಒಂದು ಆಹಾರ, ಒಂದು ಸಂಸ್ಕೃತಿಯಂತೆ, ಒಂದು ಭಾಷೆ ಹೇರಿಕೆಯಿಂದ ಇತರ ರಾಷ್ಟ್ರೀಯ ಜನಾಂಗಗಳ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಹಿಂದಿ ಹೇರಿಕೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ತಮಿಳನ್ನು ರಕ್ಷಿಸುವ ಪ್ರಯತ್ನ ನಿರಂತರವಾಗಿರುತ್ತದೆ ಎಂದರು. 

2017-20ರ ನಡುವೆ ಸಂಸ್ಕೃತವನ್ನು ಉತ್ತೇಜಿಸಲು ಕೇಂದ್ರವು ₹ 643 ಕೋಟಿ ನೀಡಿದೆ. ತಮಿಳಿಗೆ ₹ 23 ಕೋಟಿಗಿಂತ ಕಡಿಮೆ ಅನುದಾನ ನೀಡಿದೆ. ನಾವು ಯಾವುದೇ ಭಾಷೆಗೆ ಶತ್ರುಗಳಲ್ಲ, ಸ್ವಂತ ಆಸಕ್ತಿಯಿಂದ ಎಷ್ಟು ಭಾಷೆ ಬೇಕಿದ್ದರೂ ಕಲಿಯಬಹುದು. ಆದರೆ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ. ಹಲವಾರು ಹಿಂದಿ ವಿರೋಧಿ ಆಂದೋಲನಗಳ ನಂತರ, ಮಾಜಿ ಮುಖ್ಯಮಂತ್ರಿ ಸಿ.ಎನ್‌.ಅಣ್ಣಾದೊರೈ ಅವರು ದ್ವಿಭಾಷಾ ಸೂತ್ರದ ಅಡಿ ತಮಿಳು ಮತ್ತು ಇಂಗ್ಲಿಷ್ ಅನ್ನು ಜಾರಿಗೆ ತಂದರು. ಇದರಿಂದಾಗಿ ರಾಜ್ಯದ ಯುವಕರು ವಿಶ್ವದ ಅನೇಕ ಭಾಗಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು