ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ಉಲ್ಲಂಘನೆಯ 11 ಸಾವಿರ ಪ್ರಕರಣ ದಾಖಲು

Last Updated 20 ಫೆಬ್ರುವರಿ 2021, 16:00 IST
ಅಕ್ಷರ ಗಾತ್ರ

ನವದೆಹಲಿ: 2020–21ರ ಅವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ 11 ಸಾವಿರಕ್ಕೂ ಹೆಚ್ಚು ದೂರುಗಳು ಪೊಲೀಸರ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ಸಲ್ಲಿಕೆಯಾಗಿವೆ. ಇದರಲ್ಲಿ ಶೇ 48ರಷ್ಟು ಪ್ರಕರಣಗಳು ಉತ್ತರಪ್ರದೇಶದವೇ ಆಗಿದ್ದು, ಈ ಕುಖ್ಯಾತಿಯ ಪಟ್ಟಿಯಲ್ಲಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ.

2020-21ರ ಜನವರಿ 15ರವರೆಗೆ ಉತ್ತರಪ್ರದೇಶದಲ್ಲಿ 5,338 ದೂರುಗಳು, ದೆಹಲಿಯಲ್ಲಿ 940, ತಮಿಳುನಾಡು 575, ಅಸ್ಸಾಂ 562, ಹರಿಯಾಣದಲ್ಲಿ 408 ದೂರುಗಳು ಹಾಗೂ ಕರ್ನಾಟಕದಲ್ಲಿ 175 ದೂರುಗಳು ದಾಖಲಾಗಿವೆ. ಈ ಅವಧಿಯಲ್ಲಿ ಎನ್‌ಎಚ್‌ಆರ್‌ಸಿಗೆ ಒಂದೇ ಒಂದು ದೂರುಗಳು ಬಾರದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವೆಂದರೆ ಸಿಕ್ಕಿಂ ಮತ್ತು ಲಕ್ಷದ್ವೀಪ.

ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಈ ಮಾಹಿತಿ ನೀಡಿದ್ದಾರೆ.

ಎನ್‌ಎಚ್‌ಆರ್‌ಸಿ 784 ಪ್ರಕರಣಗಳಲ್ಲಿ ₹20.42 ಕೋಟಿ ಪರಿಹಾರ ನೀಡಲು ಶಿಫಾರಸು ಮಾಡಿದೆ. ಅಲ್ಲದೇ 48 ಪ್ರಕರಣಗಳಲ್ಲಿ ಶಿಸ್ತು ಕ್ರಮ ಮತ್ತು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದಾರೆ.

ಒಂದು ವಿಶ್ಲೇಷಣೆಯ ಪ್ರಕಾರ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. 2019–20ರಲ್ಲಿ 17,229 ದೂರುಗಳು ದಾಖಲಾಗಿದ್ದರೆ, 2018–19ರಲ್ಲಿ 28,342 ದೂರುಗಳಿಗೆ ಏರಿಕೆಯಾಗಿತ್ತು. 2017–18ರಲ್ಲಿ 26,391 ದೂರುಗಳು ದಾಖಲಾಗಿದ್ದವು. ಈ ಮೂರು ವರ್ಷಗಳ ಅವಧಿಯಲ್ಲಿ ಅತೀ ಹೆಚ್ಚು ದೂರುಗಳು ಬಂದಿರುವುದು ಉತ್ತರಪ್ರದೇಶದಲ್ಲೇ ಎನ್ನುವುದು ಗಮನಿಸಬೇಕಾದ ಸಂಗತಿ.

ಕರ್ನಾಟಕದಲ್ಲಿ 2017-18 ಮತ್ತು 2018-19ರಲ್ಲಿ ಕ್ರಮವಾಗಿ 211 ಮತ್ತು 264 ದೂರುಗಳು ಬಂದಿದ್ದರೆ, 2019-20ರಲ್ಲಿ 158 ದೂರುಗಳು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT