ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯಾ ಮರಣ: ಮಾರ್ಗಸೂಚಿ ಪರಿಷ್ಕರಣೆಗೆ ‘ಸುಪ್ರೀಂ’ ಒಪ್ಪಿಗೆ

Last Updated 17 ಜನವರಿ 2023, 14:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದಯಾ ಮರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ‘ಮರಣ ಇಚ್ಛೆಯ ಉಯಿಲು’ (ಲಿವಿಂಗ್ ವಿಲ್) ಕುರಿತ ಮಾರ್ಗಸೂಚಿಯನ್ನು ಮಾರ್ಪಡಿಸಲು ಮಂಗಳವಾರ ಒಪ್ಪಿಗೆ ನೀಡಿದೆ.

ದಿ ಇಂಡಿಯನ್‌ ಸೊಸೈಟಿ ಫಾರ್‌ ಕ್ರಿಟಿಕಲ್ ಕೇರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠವು ವಿಚಾರಣೆಗೆ ಒಳಪಡಿಸಿತು.

‘ಮಾರ್ಗಸೂಚಿ ಪರಿಷ್ಕರಣೆಯ ಮನವಿಯನ್ನು ನಾವು ಪರಿಗಣಿಸಿದ್ದೇವೆ. ಈ ವಿಚಾರದಲ್ಲಿ ನ್ಯಾಯಾಲಯದ ಇತಿಮಿತಿ ಏನು ಎಂಬುದರ ಅರಿವೂ ನಮಗಿದೆ. ವೈದ್ಯಕೀಯ ವಿಚಾರದಲ್ಲಿ ನಾವ್ಯಾರೂ ಪರಿಣತರಲ್ಲ’ ಎಂದು ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ, ಅನಿರುದ್ಧ್‌ ಬೋಸ್‌, ಹೃಷಿಕೇಶ್‌ ರಾಯ್‌ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠ ತಿಳಿಸಿತು.

‘ಸದ್ಯ ಅಸ್ತಿತ್ವದಲ್ಲಿರುವ ವ್ಯವಸ್ಥೆ ಪ್ರಕಾರ ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿಯು ಗುಣಮುಖನಾಗುವ ಸಾಧ್ಯತೆಯೇ ಇಲ್ಲ ಅಥವಾ ಆತನ ಮಿದುಳು ನಿಷ್ಕ್ರಿಯವಾಗಿದೆ ಎಂಬುದನ್ನು ವೈದ್ಯಕೀಯ ಮಂಡಳಿ ಮೊದಲು ಘೋಷಿಸಬೇಕು. ಈ ಸಂಬಂಧ ಎರಡನೇ ಅಭಿಪ್ರಾಯ ಪಡೆಯಲು ಜಿಲ್ಲಾಧಿಕಾರಿಗಳು ಸ್ವತಂತ್ರ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಬೇಕು. ನಂತರ ಈ ವಿಚಾರವನ್ನು ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ಗೆ ವರ್ಗಾಯಿಸಬೇಕಾಗುತ್ತದೆ. ಈ ಪದ್ಧತಿಯು ತುಂಬಾ ಜಟಿಲವಾಗಿದೆ’ ಎಂದು ಅರ್ಜಿದಾರರ ಪರ ವಕೀಲ ಅರವಿಂದ್‌ ಪಿ.ದಾತರ್‌ ಅವರು ಸಾಂವಿಧಾನಿಕ ಪೀಠಕ್ಕೆ ತಿಳಿಸಿದರು.

‘ಈಗಿರುವ ವ್ಯವಸ್ಥೆಯಿಂದ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅನ್ನು ಹೊರಗಿಡಬೇಕು’ ಎಂದೂ ಅವರು ಹೇಳಿದರು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT