ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ದಾಖಲೆ ಮುರಿದ ಭಾರತ: 77,700 ಭಾರತೀಯರಿಂದ ಏಕಕಾಲದಲ್ಲಿ ಧ್ವಜಾರೋಹಣ

ಘಟನೆಗೆ ಸಾಕ್ಷಿಯಾದ ಕೇಂಧ್ರ ಗೃಹ ಸಚಿವ ಅಮಿತ್‌ ಶಾ
Last Updated 24 ಏಪ್ರಿಲ್ 2022, 5:40 IST
ಅಕ್ಷರ ಗಾತ್ರ

ಜಗದೀಶ್‌ಪುರ, ಬಿಹಾರ:ಬಿಹಾರದ ಜಗದೀಶ್‌ಪುರದಲ್ಲಿ ಶನಿವಾರ‌ 77,700 ಭಾರತೀಯರಿಂದ ಏಕಕಾಲದಲ್ಲಿ ಧ್ವಜ ಹಾರಿಸುವ ಮೂಲಕ ಮೂಲಕ ಬಿಜೆಪಿಯು ಪಾಕಿಸ್ತಾನದ 18 ವರ್ಷದ ಹಿಂದಿನ ದಾಖಲೆಯನ್ನು ಮುರಿದಿದೆ. ಈ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಾಕ್ಷಿಯಾಗಿದ್ದರು.

75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ, ಜಗದೀಶ್‌ಪುರದ ರಾಜ, 1857ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ನಾಯಕ, ವೀರ ಕುನ್ವರ್‌ ಸಿಂಗ್‌ ಅವರ ಜನ್ಮದಿನದ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿಯೇ ಭಾರತೀಯರು ಧ್ವಜಾರೋಹಣ ಮಾಡಿದರು.

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಉಪಮುಖ್ಯಮಂತ್ರಿಗಳಾದ ತಾರ್‌ಕಿಶೋರ್‌ ಪ್ರಸಾದ್‌ ಮತ್ತು ರೇಣು ದೇವಿ, ಕೇಂದ್ರ ಸಚಿವರಾದ ಆರ್‌.ಕೆ. ಸಿಂಗ್‌ ಹಾಗೂ ನಿತ್ಯಾನಂದ ರೈ ಅವರೊಂದಿಗೆ ಆಗಮಿಸಿದ ಅಮಿತ್‌ ಶಾ ಕಾರ್ಯಕ್ರಮಕ್ಕೆ ಆಗಮಿಸಿದರು. ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಪ್ರಸಾರದ ವೇಳೆ ಒಟ್ಟು 5 ನಿಮಿಷಗಳ ಕಾಲ ರಾಷ್ಟ್ರೀಯ ಧ್ವಜವನ್ನು ಹಾರಿಸಲಾಯಿತು.

ಗಿನ್ನಿಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಅವರ ಮೇಲ್ವಿಚಾರಣೆಯಲ್ಲಿ, ಕಾರ್ಯಕ್ರಮಕ್ಕೆ ಹಾಜರಾದವರ ಭೌತಿಕ ಗುರುತಿಗೆ, ಗುರುತಿನ ಚಿಹ್ನೆ, ಹಾಗೂ ಕ್ಯಾಮರಾದ ಕಣ್ಗಾವಲನ್ನು ರಚಿಸಲಾಗಿತ್ತು. ಧ್ವಜಾರೋಹಣದ ದೃಶ್ಯ ಎಲ್ಲರಿಗೂ ಕಾಣಿಸುವಂತೆ ದೈತ್ಯ ಪರದೆಯನ್ನು ಸಿದ್ಧಪಡಿಸಲಾಗಿತ್ತು.

2004ರಲ್ಲಿ 56 ಸಾವಿರ ಪಾಕಿಸ್ತಾನಿಯರು ಲಾಹೋರ್‌ನಲ್ಲಿ ಪಾಕ್‌ ಧ್ವಜವನ್ನು ಹಾರಿಸಿದ್ದರು. ಈ ದಾಖಲೆಯನ್ನು ಈಗ ಭಾರತ ಮುರಿದಿದೆ.

‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಇಂದಿನ ಯುವಜನತೆಗೆ ತಿಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಮುಖ ಅಂಶವಾಗಿದೆ’ ಎಂದು ಅಮಿತ್‌ ಶಾ ಹೇಳಿದರು.

ಇದೇ ವೇಳೆ ವೀರ ಕುನ್ವರ್‌ ಸಿಂಗ್‌ರಂತಹವರ ಕೊಡುಗೆಗಳನ್ನು ಎತ್ತಿ ತೋರಿಸುಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್‌ಎಸ್‌ಎಸ್‌ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್‌ ಅವರನ್ನು ಅಮಿತ್‌ ಶಾ ಸ್ಮರಿಸಿದರು.

‘ಜಂಗಲ್‌ ರಾಜ್‌’ ಎಂದೇ ಪ್ರಖ್ಯಾತವಾಗಿದ್ದ ಬಿಹಾರವನ್ನು ಮುಕ್ತಗೊಳಿಸುವಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪಾತ್ರವನ್ನು ಅಮಿತ್‌ ಶಾ ಶ್ಲಾಘಿಸಿ, ‘ಜಂಗಲ್‌ ರಾಜ್‌ನ ನೆನಪಿನಿಂದ ಲಾಲು ಪ್ರಸಾದ್‌ ಚಿತ್ರ ಯಾವತ್ತೂ ಅಳಿಸಿ ಹೋಗುವುದಿಲ್ಲ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

‘ಪ್ರಧಾನಿ ಮೋದಿ ಅವರು 2047ರ ವೇಳೆಗೆ ಭಾರತವನ್ನು ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೆ ತರಬೇಕೆಂಬ ಗುರಿ ಹೊಂದಿದ್ದಾರೆ’ ಎಂದರು. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ತುಂಬಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT