ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ: ಮಹಾರಾಷ್ಟ್ರ ಮೊದಲು, ರಾಜ್ಯಕ್ಕೆ 2ನೇ ಸ್ಥಾನ 

ಅಪಘಾತದಿಂದ 1.55 ಲಕ್ಷ ಜನ ಸಾವು; ರಾಜ್ಯಕ್ಕೆ ಎರಡನೇ ಸ್ಥಾನ–ಎನ್‌ಸಿಆರ್‌ಬಿ ವರದಿ
Last Updated 30 ಆಗಸ್ಟ್ 2022, 13:06 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ಸನ್ನಿವೇಶವಿದ್ದ 2021ರಲ್ಲಿ ದೇಶದಲ್ಲಿ 10,881ರೈತರು ಮತ್ತು ರೈತ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪಟ್ಟಿಯಲ್ಲಿ ಮಹಾರಾಷ್ಟ್ರ (ಶೇ 37.3) ಮತ್ತು ಕರ್ನಾಟಕ (ಶೇ19.9) ಮೊದಲೆರಡು ಸ್ಥಾನಗಳಲ್ಲಿವೆ.

ಆತ್ಮಹತ್ಯೆ ಪ್ರಕರಣಗಳ ವರದಿ ಬಿಡುಗಡೆ ಮಾಡಿರುವರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ನಂತರದ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಆಂಧ್ರಪ್ರದೇಶ (ಶೇ 9.8), ಮಧ್ಯಪ್ರದೇಶ (ಶೇ 6.2) ಮತ್ತು ತಮಿಳುನಾಡು (ಶೇ 5.5) ರಾಜ್ಯಗಳಿವೆ. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ, ಉತ್ತರಾಖಂಡ, ಚಂಡೀಗಡ, ಲಕ್ಷದ್ವೀಪ, ಪುದುಚೇರಿಯಲ್ಲಿ ರೈತರು ಮತ್ತು ರೈತ ಕಾರ್ಮಿಕರ ಆತ್ಮಹತ್ಯೆ ನಡೆದಿಲ್ಲ ಎಂದು ಹೇಳಿದೆ.

ಆತ್ಮಹತ್ಯೆ ಮಾಡಿಕೊಂಡವರಲ್ಲಿ 5,318 ಕೃಷಿಕರು ಮತ್ತು 5,563 ಕೃಷಿ ಕಾರ್ಮಿಕರು ಹಾಗೂ 211 ರೈತ ಮಹಿಳೆಯರು ಎಂದು ವಿಂಗಡಿಸಲಾಗಿದೆ.

ಕಳೆದ ವರ್ಷ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶ್ರಮಿಕ ವರ್ಗದವರೇ ಹೆಚ್ಚಿದ್ದು,ದಿನಗೂಲಿಗಳು (37,751), ಸ್ವ ಉದ್ಯೋಗಿಗಳು (18,803) ಮತ್ತು ನಿರುದ್ಯೋಗಿಗಳು (11,724) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ

ರಸ್ತೆ ಅಪಘಾತ:ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಗೆ ಅತಿ ವೇಗ ಮತ್ತು ಅಜಾಗರೂಕ ಚಾಲನೆಯೇ ಪ್ರಮುಖ ಕಾರಣಗಳಾಗಿದ್ದು, 2021ರಲ್ಲಿ ಒಟ್ಟು1,55,622 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ.

ಕಳೆದ ಒಂದು ವರ್ಷದಲ್ಲಿ ನಡೆದ ಒಟ್ಟು 4,03,116 ರಸ್ತೆ ಅಪಘಾತಗಳಲ್ಲಿಅತಿಯಾದ ವೇಗದಿಂದ ಸಂಭವಿಸಿದ ಅಪಘಾತಗಳ ಸಂಖ್ಯೆ 2,40,828 (ಶೇ 59.7). ಇದರಲ್ಲಿ 87,050 ಜನರು ಮೃತಪಟ್ಟಿದ್ದು, 2,28,274 ಜನರು ಗಾಯಗೊಂಡಿದ್ದಾರೆ.ಈ ಪಟ್ಟಿಯಲ್ಲಿ ತಮಿಳುನಾಡು (11,419 ಮಂದಿ ಸಾವು) ಮೊದಲ (ಶೇ 13.1) ಸ್ಥಾನದಲ್ಲಿದ್ದರೆ, ಕರ್ನಾಟಕ (8,797) ಎರಡನೇ (ಶೇ 10.1) ಸ್ಥಾನದಲ್ಲಿದೆ.

ಅಪಾಯಕಾರಿ ಚಾಲನೆ ಮತ್ತು ವಾಹನ ಹಿಂದಿಕ್ಕುವ ಭರದಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆ 1,03,629. ಇದರಲ್ಲಿ 42,853 ಜನರು ಮೃತಪಟ್ಟಿದ್ದು, 91,839 ಜನರು ಗಾಯಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಉತ್ತರಪ್ರದೇಶ (11,479) ಮತ್ತು ರಾಜಸ್ಥಾನ (4,299) ಮೊದಲೆರಡು ಸ್ಥಾನಗಳಲ್ಲಿವೆ. ಮಾದಕ ವಸ್ತು ಸೇವನೆಯಿಂದ ಸಂಭವಿಸಿದ ಅಪಘಾತಗಳಲ್ಲೂ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ತೆಲಂಗಾಣ, ಜಾರ್ಖಂಡ್‌, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿವೆಎಂದು ವರದಿ ಹೇಳಿದೆ.

ಎನ್‌ಸಿಆರ್‌ಬಿಯ ಇತ್ತೀಚಿನ ವರದಿಯ ಪ್ರಕಾರ, ಒಟ್ಟು ಅಪಘಾತಗಳಲ್ಲಿಮಾದಕ ವಸ್ತು ಅಥವಾ ಮದ್ಯ ಸೇವನೆಯಿಂದಾದ ಅಪಘಾತಗಳ ಪ್ರಮಾಣ ಶೇ 1.9 ಇದ್ದು, 2,935 ಜನರು ಮೃತಪಟ್ಟು, 7,235 ಜನರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT