ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓಯೊ’ ಸಂಸ್ಥಾಪಕ ರಿತೇಶ್ ಅಗರವಾಲ್ ಅವರ ತಂದೆ ಕಟ್ಟಡದಿಂದ ಬಿದ್ದು ಸಾವು

Last Updated 10 ಮಾರ್ಚ್ 2023, 15:32 IST
ಅಕ್ಷರ ಗಾತ್ರ

ನವದೆಹಲಿ: ಸ್ಟಾರ್ಟ್‌ಅಪ್ ಕಂಪನಿ ‘ಓಯೊ’ದ ಸಂಸ್ಥಾಪಕ ಹಾಗೂ ಸಿಇಒ ರಿತೇಶ್ ಅಗರವಾಲ್ ಅವರ ತಂದೆ ಕಟ್ಟಡದಿಂದ ಬಿದ್ದು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಗುರುಗ್ರಾಮ (ಪೂರ್ವ) ಡಿಸಿಪಿ ವೀರೇಂದ್ರ ವಿಜ್‌ ಮಾಹಿತಿ ನೀಡಿದ್ದಾರೆ. ಗುರುಗ್ರಾಮದ ಸೆಕ್ಟರ್‌ 54ರಲ್ಲಿರುವ ಡಿಎಲ್‌ಎಫ್‌ ದಿ ಕ್ರೆಸ್ಟ್‌ ಸೊಸೈಟಿಯಲ್ಲಿರುವ ವಸತಿ ಸಮುಚ್ಚಯದ 20ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದಾರೆ ಎಂಬ ಮಾಹಿತಿ ಮಧ್ಯಾಹ್ನ 1ಗಂಟೆ ವೇಳೆಗೆ ಬಂದಿತು. ಪೊಲೀಸರು ಕುಟುಂಬದವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್‌ 174ರ (ಅಸಹಜ ಸಾವು) ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಂದೆಯ ಸಾವಿನ ಬಗ್ಗೆ ಹೇಳಿಕೆ ನೀಡಿರುವ ರಿತೇಶ್ ಅಗರವಾಲ್‌, 'ನಮ್ಮ ಕುಟುಂಬದ ಮಾರ್ಗದರ್ಶಕ ಮತ್ತು ಶಕ್ತಿಯಾಗಿದ್ದ ನನ್ನ ತಂದೆ ರಮೇಶ್‌ ಅಗರವಾಲ್‌ ಅವರು ಮಾರ್ಚ್‌ 10ರಂದು (ಇಂದು) ನಿಧನರಾದರು ಎಂದು ನಾನು ಮತ್ತು ನನ್ನ ಕುಟುಂಬ ತುಂಬಾ ದುಃಖದಿಂದ ತಿಳಿಸುತ್ತಿದ್ದೇವೆ. ಅವರು ತುಂಬು ಜೀವನವನ್ನು ನಡೆಸಿದ್ದರು ಹಾಗೂ ನಾನೂ ಸೇರಿದಂತೆ ನನ್ನಂತಹ ಹಲವರಿಗೆ ಪ್ರತಿನಿತ್ಯವೂ ಸ್ಫೂರ್ತಿಯಾಗಿದ್ದರು. ಅವರ ಸಾವು ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅಪ್ಪನ ಸಹಾನುಭೂತಿ ಮತ್ತು ಅಕ್ಕರೆ ಕಷ್ಟದ ಸಮಯದಲ್ಲಿ ನಮಗೆ ದಾರಿ ತೋರಿದೆ. ಅವರ ಮಾತುಗಳು ನಮ್ಮ ಹೃದಯಾಂತರಾಳದಲ್ಲಿ ಪ್ರತಿಧ್ವನಿಸುತ್ತಿರುತ್ತವೆ. ಈ ದುಃಖದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುವಂತೆ ಎಲ್ಲರಲ್ಲಿ ಮನವಿ ಮಾಡುತ್ತೇನೆ' ಎಂದಿದ್ದಾರೆ.

29 ವರ್ಷದ ರಿತೇಶ್‌ ಅಗರವಾಲ್ ಅವರು ದೆಹಲಿಯ ಗೀತಾಂಶ ಸೂದ್ ಅವರೊಂದಿಗೆ ಈ ವಾರದ ಆರಂಭದಲ್ಲಿ ವಿವಾಹವಾಗಿದ್ದರು. ಜಪಾನ್‌ನ ಜಾಗತಿಕ ಹೂಡಿಕೆ ಕಂಪನಿಯಾದ ‘ಸಾಫ್ಟ್‌ಬ್ಯಾಂಕ್‌’ನ ಸಿಇಒ ಮಸಾಯೋಶಿ ಸನ್ ಅವರೂ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT