ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಜಮ್ಮು–ಕಾಶ್ಮೀರ ಪಕ್ಷಗಳಿಂದ ನಾಳೆ ನಿರ್ಧಾರ

Last Updated 21 ಜೂನ್ 2021, 10:43 IST
ಅಕ್ಷರ ಗಾತ್ರ

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 24ರಂದು ಕರೆದಿರುವ ಸಭೆಯ ಕಾರ್ಯಸೂಚಿ ಏನೆಂಬುದು ತಿಳಿಯದಿರುವುದರಿಂದ ಯಾವ ನಿರ್ಧಾರ ಕೈಗೊಳ್ಳಬೇಕೆಂಬ ಬಗ್ಗೆ ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ)’ ಮೈತ್ರಿಕೂಟ ಸಮಾಲೋಚನೆ ನಡೆಸುತ್ತಿದೆ.

2019ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿದ್ದ ವಿಶೇಷ ಸ್ಥಾನಮಾನದ ಮರು ಸ್ಥಾಪನೆಗಾಗಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಥಾಪನೆಯಾಗಿರುವ, ಜಮ್ಮು–ಕಾಶ್ಮೀರದ ಆರು ರಾಜಕೀಯ ಪಕ್ಷಗಳ ಮೈತ್ರಿಯಾಗಿದೆ ಪಿಎಜಿಡಿ.

ಬೇರೆ ಆಯ್ಕೆಗಳಿಲ್ಲದಿರುವ ಕಾರಣ ಮುಂದಿನ ನಿರ್ಧಾರ ಕೈಗೊಳ್ಳಲು ಪಿಎಜಿಡಿ ಮಂಗಳವಾರ (ಜೂನ್ 22) ಸಭೆ ನಡೆಸಲಿದೆ. ಪಿಎಜಿಡಿ ಅಧ್ಯಕ್ಷ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರೂ ಆಗಿರುವ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದೆ.

ಪಿಎಜಿಡಿ ಮೈತ್ರಿಯ ಮುಖ್ಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಈಗಾಗಲೇ ಹಲವು ಸುತ್ತಿನ ಸಮಾಲೋಚನೆ ನಡೆಸಿವೆ.

ಪ್ರಧಾನಿಯವರ ಸಭೆಯ ಕಾರ್ಯಸೂಚಿ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಮುಂದಿನ ಕಾರ್ಯತಂತ್ರಗಳ ಬಗ್ಗೆ ಮೈತ್ರಿಕೂಟವು ಮಂಗಳವಾರ ತೀರ್ಮಾನ ಕೈಗೊಳ್ಳಲಿದೆ ಎಂದು ಪಿಎಜಿಡಿ ವಕ್ತಾರ, ಸಿಪಿಐ(ಎಂ) ಹಿರಿಯ ನಾಯಕ ಮೊಹಮ್ಮದ್ ಯೂಸುಫ್ ತಾರಿಗಮಿ ಹೇಳಿದ್ದಾರೆ.

‘ಪ್ರಧಾನಿ ಸಭೆ ಕರೆಯುತ್ತಿದ್ದಾರೆ. ಒಂದು ಅವಕಾಶ ನೀಡಿದರೆ ನಾವು ನಮ್ಮ ವಿಚಾರಗಳನ್ನು ತಿಳಿಸಲಿದ್ದೇವೆ. ಇದು ಷರತ್ತುಬದ್ಧ ಮಾತುಕತೆಯಲ್ಲ’ ಎಂದೂ ಅವರು ‘ಡೆಕ್ಕನ್ ಹೆರಾಲ್ಡ್‌’ಗೆ ತಿಳಿಸಿದ್ದಾರೆ.

ಮೈತ್ರಿಕೂಟದ ಪರವಾಗಿ ಫಾರೂಕ್ ಅಬ್ದುಲ್ಲಾ ಅವರನ್ನು ಪ್ರಧಾನಿ ಸಭೆಗೆ ಕಳುಹಿಸುವುದು ಸೂಕ್ತ ಎಂದು ಪಿಡಿಪಿ ಮುಖ್ಯಸ್ಥೆ, ಜಮ್ಮು–ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

‘ಹೀಗೆ ಮಾಡುವುದರಿಂದ ಮೈತ್ರಿಕೂಟವು ಒಗ್ಗಟ್ಟಾಗಿದೆ ಮತ್ತು ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿ ನೀಡಬೇಕೆಂಬ ನಮ್ಮ ನಿಲುವು ಅಚಲವಾಗಿದೆ ಎಂಬ ಸಂದೇಶ ಕಳುಹಿಸಿದಂತಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT