ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪನ್ಸಾರೆ ಹತ್ಯೆ ಪ್ರಕರಣ: ತನಿಖೆಯನ್ನು ಎಟಿಎಸ್‌ಗೆ ವರ್ಗಾಯಿಸಿ’

Last Updated 7 ಜುಲೈ 2022, 14:52 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ‘ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸಿಐಡಿಯಿಂದ ಎಟಿಎಸ್‌ಗೆ ವರ್ಗಾಯಿಸಿ’ ಎಂದು ಪನ್ಸಾರೆ ಅವರ ಸೊಸೆ ಮೇಘಾ ಪನ್ಸಾರೆ, ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ನ್ಯಾಯಾಲಯಕ್ಕೆ ಗುರುವಾರ ಮಧ್ಯಂತರ ಅರ್ಜಿ ಸಲ್ಲಿಸಿರುವ ಅವರು ‘2015ರಿಂದಲೂ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ವಿ.ಜಿ.ಬಿಷ್ಠ್‌ ನೇತೃತ್ವದ ಪೀಠವು ಈ ಸಂಬಂಧ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್‌ ಜಾರಿಮಾಡಿದ್ದು, 2020ರಿಂದ ಇಲ್ಲಿಯವರೆಗೂ ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿಯ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಸಿಐಡಿಗೆ ನಿರ್ದೇಶಿಸಿದೆ.

‘ಪನ್ಸಾರೆ, ನರೇಂದ್ರ ದಾಭೋಲ್ಕರ್‌, ಪ್ರೊ.ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯ ಹಿಂದೆ ದೊಡ್ಡ ಪಿತೂರಿ ಅಡಗಿದೆ. ಈ ಹತ್ಯೆಗಳ ಹಿಂದಿರುವ ವ್ಯಕ್ತಿಯನ್ನು ಪತ್ತೆಹಚ್ಚಬೇಕು. ಹಂತಕರೊಂದಿಗೆ ಆತನಿಗಿರುವ ಸಂಬಂಧದ ಬಗ್ಗೆ ತನಿಖೆಯಾಗಬೇಕು’ ಎಂದು ಮೇಘಾ ಅವರ ಪರ ವಕೀಲ ಅಭಯ್‌ ನೇವಗಿ ಅವರು ಪೀಠವನ್ನು ಆಗ್ರಹಿಸಿದರು.

‘ಧಾಬೋಲ್ಕರ್‌ ಹತ್ಯೆಯ ತನಿಖೆ ಪ್ರಗತಿಯಲ್ಲಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಬೇರೊಂದು ಸಂಸ್ಥೆಗೆ ವರ್ಗಾಯಿಸಲು ಆಗುವುದಿಲ್ಲ. ಆದರೆ ಪನ್ಸಾರೆ ಪ್ರಕರಣದ ತನಿಖೆಯನ್ನು ಹೈಕೋರ್ಟ್‌ ಆದೇಶದನ್ವಯ ಎಟಿಎಸ್‌ಗೆ ವರ್ಗಾಯಿಸಬಹುದು’ ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಪನ್ಸಾರೆ ಪ್ರಕರಣದ ತನಿಖಾ ಅಧಿಕಾರಿಯಾಗಿರುವ ಹೆಚ್ಚುವರಿ ಎಸ್‌ಪಿ ತಿರುಪತಿ ಕಾಕಡೆ ಅವರನ್ನು ತನಿಖಾ ತಂಡದಿಂದ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಪೀಠ ಪುರಸ್ಕರಿಸಿತು. ದಾಭೋ‌ಲ್ಕರ್‌ ಹಾಗೂ ಪನ್ಸಾರೆ ಹತ್ಯೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ನ್ಯಾಯಾಲಯದ ಅನುಮತಿ ಇಲ್ಲದೆ ವರ್ಗಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಈ ಮೊದಲು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

ಹೊಸ ತನಿಖಾ ಅಧಿಕಾರಿಯ ನೇಮಕ ಸಂಬಂಧ ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿರುವ ಪೀಠ, ಹೊಸ ಅಧಿಕಾರಿ ನೇಮಕವಾದ ಬಳಿಕವೇ ಕಾಕಡೆ ಅವರನ್ನು ತನಿಖಾ ತಂಡದಿಂದ ಬಿಡುಗಡೆ ಮಾಡುವಂತೆ ನಿರ್ದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT