ನವದೆಹಲಿ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ವಿಚಾರಣೆಗೆ ಒಳಪಡಿಸುವ ಆರೋಪಿಗಳ ವಯಸ್ಸಿನ ಮಿತಿಯನ್ನು 18 ವರ್ಷದಿಂದ 16 ವರ್ಷಕ್ಕೆ ಇಳಿಸುವಂತೆ ಒತ್ತಡ ಹೇರದಿರಲು ಸಂಸದೀಯ ಸಮಿತಿ ನಿರ್ಧರಿಸಿದೆ.
‘ಪೋಕ್ಸೊ ಪ್ರಕರಣದಡಿ ಬರುವ ವಯೋಮಾನದವರು ಮಾಡುವ ಹೀನಾಯ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಈಗಿರುವ ಕಾನೂನುಗಳೇ ಸಾಕು ಎಂದು ಸರ್ಕಾರ ಪ್ರತಿಪಾದಿಸಿದ ನಂತರ, ಸಮಿತಿ ಈ ನಿರ್ಧಾರ ಕೈಗೊಂಡಿದೆ.
ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ನಾಯಕ ಆನಂದ ಶರ್ಮಾ ನೇತೃತ್ವದ ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿ, ‘ಪೋಕ್ಸೊ ಕಾಯ್ದೆಯಡಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈ ಪ್ರಕರಣಗಳಲ್ಲಿ ಆರೋಪಿಗಳ ವಯಸ್ಸು ಗಮನಿಸಿದರೆ ಕಾನೂನು ಅನ್ವಯಿಸಲು ಆಗುವುದಿಲ್ಲ ಎಂದು ಹೇಳಿತ್ತು.
‘ಅಪ್ರಾಪ್ತ ವಯಸ್ಸಿನ ಮಕ್ಕಳು ಮಾಡುವ ಅಪರಾಧಗಳ ಬಗ್ಗೆ ಈ ಹಂತದಲ್ಲೇ ಸರಿಪಡಿಸದಿದ್ದರೆ, ಮುಂದೆ ಅವರು ಗಂಭೀರವಾದ ಅಪರಾಧಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೋಕ್ಸೊದಡಿ ಗಂಭೀರ ಪ್ರಕರಣಗಳಲ್ಲಿ ದಾಖಲಾಗುವ ಮಕ್ಕಳ ವಯಸ್ಸಿನ ಮಿತಿಯನ್ನು ಇಳಿಸಬೇಕು‘ ಎಂದು ಸಂಸದೀಯ ಸಮಿತಿ ಸರ್ಕಾರವನ್ನು ಕೇಳಿತ್ತು.
ಈ ವಯೋಮಾನದವರು ಮಾಡುವ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಈಗಿರುವ ಕಾನೂನುಗಳೇ ಸಾಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರತಿಕ್ರಿಯಿಸಿದೆ.
ಹದಿನಾರು ವರ್ಷ ವಯಸ್ಸಿನ ಮೇಲಿನ ಮಕ್ಕಳು ಮತ್ತು 18 ವರ್ಷದೊಳಗಿನ ಮಕ್ಕಳು ಭಾಗಿಯಾಗುವ ಹೀನಾಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನೂ ಬಾಲ ನ್ಯಾಯ ಕಾಯ್ದೆ ಒಳಗೊಂಡಿದೆ ಎಂದು ಸಚಿವಾಲಯ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.