ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ಸರ್ಕಾರ ಬೀಳಿಸಲು ಬಿಜೆಪಿ ಪರಮ್‌ ಸಿಂಗ್‌ನನ್ನು ಬಳಸುತ್ತಿದೆ: ಶಿವಸೇನಾ ಆರೋಪ

Last Updated 22 ಮಾರ್ಚ್ 2021, 7:02 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರದ ಸರ್ಕಾರಕ್ಕೆ ಸಾಕಷ್ಟು ಸಂಖ್ಯಾಬಲವಿದೆ. ಒಬ್ಬ ಅಧಿಕಾರಿ ಮಾಡಿರುವ ಭ್ರಷ್ಟಾಚಾರ ಆರೋಪದಿಂದಾಗಿ ಸರ್ಕಾರ ಬೀಳಲು ಸಾಧ್ಯವಿಲ್ಲ’ ಎಂದು ಶಿವಸೇನಾ ಸೋಮವಾರ ಹೇಳಿದೆ.

‘ಮುಂಬೈನ ಮಾಜಿ ಪೊಲೀಸ್‌ ಮುಖ್ಯಸ್ಥ ಪರಮ್‌ ಬೀರ್‌ ಸಿಂಗ್‌ ಅವರು ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದರಿಂದಾಗಿ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿರುವುದು ನಿಜ. ಆದರೆ ಒಬ್ಬ ಅಧಿಕಾರಿಯಿಂದ ನಮ್ಮ ಸರ್ಕಾರ ಬೀಳಲು ಸಾಧ್ಯವಿಲ್ಲ’ ಎಂದು ಶಿವಸೇನಾ ವಿಶ್ವಾಸ ವ್ಯಕ್ತಪಡಿಸಿದೆ.

‘ಇದು ಶಿವಸೇನಾ ನೇತೃತ್ವದ ಸರ್ಕಾರಕ್ಕೆ ಪ‍್ರತಿಷ್ಠೆಯ ವಿಷಯವಾಗಿದೆ. ಬಿಜೆಪಿಯು ಮಹಾರಾಷ್ಟ್ರ ಸರ್ಕಾರದ ಬಹುಮತವನ್ನು ಹಾಳುಗೆಡವಲು ಪ್ರಯತ್ನಿಸಿದರೆ ಮಾತ್ರ, ಬೆಂಕಿ ಕಾಣಿಸಿಕೊಳ್ಳಲಿದೆ’ಎಂದು ಶಿವಸೇನಾದ ಮುಖವಾಣಿ ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ಕಳೆದ ವಾರ ಪರಮ್‌ ಬೀರ್‌ ಸಿಂಗ್‌ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಅನಿಲ್‌ ದೇಶ್‌ಮುಖ್ ವಿರುದ್ಧ‌ ಭ್ರಷ್ಟಾಚಾರದ ಆರೋಪ ಮಾಡಿ ಪತ್ರ ಬರೆದಿದ್ದರು.

‘ಅನಿಲ್‌ ದೇಶ್‌ಮುಖ್‌ ಅವರು ಮುಂಬೈನ ಬಾರ್‌ ಮತ್ತು ಹೋಟೆಲ್‌ಗಳಿಂದ ಪ್ರತಿ ತಿಂಗಳು ₹100 ಕೋಟಿ ಸಂಗ್ರಹಿಸುವಂತೆ ಪೊಲೀಸರಿಗೆ ಸೂಚಿಸಿದ್ದರು’ ಎಂದು ಸಿಂಗ್‌ ಪತ್ರದಲ್ಲಿ ದೂರಿದ್ದರು. ಈ ಪತ್ರದಿಂದಾಗಿ ಮಹಾರಾಷ್ಟ್ರದ ರಾಜಕೀಯದಲ್ಲಿ ಹೊಸ ಬಿರುಗಾಳಿ ಎದ್ದಿದೆ.

‘ಕಳೆದ ವಾರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಸಭೆ ನಡೆಸಿದ್ದರು. ಈ ಬಳಿಕ ಭ್ರಷ್ಟಾಚಾರದ ಬಗ್ಗೆ ಪತ್ರವನ್ನು ಬರೆಯಲಾಗಿದೆ. ಹಾಗಾಗಿ ಸಿಂಗ್‌ ಬರೆದಿರುವ ಪತ್ರವು ಬಿಜೆಪಿಯ ಪಿತೂರಿಯ ಭಾಗದಂತೆ ಕಾಣಿಸುತ್ತಿದೆ’ ಎಂದು ಸಂಪಾದಕೀಯದಲ್ಲಿ ಆರೋ‍ಪಿಸಲಾಗಿದೆ.

‘ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದನ್ನು ಪ್ರತಿಪಾದಿಸುವ ಮೂಲಕ ಬಿಜೆಪಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತರಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಬಿಜೆಪಿ, ಸಿಂಗ್‌ ಅವರನ್ನು ಬಳಸಿಕೊಳ್ಳುತ್ತಿದೆ. ಈ ಹಿಂದೆ ಅಂಬಾನಿ ಪ್ರಕರಣದಲ್ಲಿ ಪರಮ್‌ ಸಿಂಗ್‌ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದ ಬಿಜೆಪಿಗೆ ಈಗ ‍‍‍ಪರಮ್‌ ಸಿಂಗ್‌ ಆಪ್ತನಾಗಿದ್ದಾನೆ’ ಎಂದು ಸಂಪಾದಕೀಯದಲ್ಲಿ ದೂರಲಾಗಿದೆ.

ಆದರೆ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ತಲ್ಲಿ ಹಾಕಿರುವ ಅನಿಲ್ ದೇಶ್‌ಮುಖ್‌ ಅವರು,‘ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣದಡಿ ಎನ್‌ಐಎ ಸಚಿನ್‌ ವಾಜೆಯನ್ನು ಬಂಧಿಸಿದೆ. ಹಾಗಾಗಿ ಈ ಪ್ರಕರಣದಿಂದ ತಾನು ದೂರ ಉಳಿಯಬೇಕು ಎಂಬ ಕಾರಣಕ್ಕೆ ಈ ರೀತಿಯ ಆಪಾದನೆಗಳನ್ನು ಸಿಂಗ್‌ ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇತ್ತೀಚಿಗೆ ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣದಡಿ ಪರಮ್‌ ಬೀರ್‌ ಸಿಂಗ್‌ ಅವರನ್ನು ಮುಂಬೈ ಪೊಲೀಸ್‌ ಆಯುಕ್ತರ ಸ್ಥಾನದಿಂದ ಕೆಳಗಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT